ಬೆಳ್ತಂಗಡಿ, ಧರ್ಮಸ್ಥಳ: ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆ ಹಾಗೂ ಅವರ ಕುಟುಂಬದವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳು ಮತ್ತು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡದಂತೆ ಮಧ್ಯಂತರ ತಡೆಯಾಜ್ಞೆ ಹೊರಡಿಸಿದೆ.
ಈ ಸಂಬಂಧ ಡಾ. ಹೆಗಡೆ ಅವರ ಕುಟುಂಬದ ಪರವಾಗಿ ಡಿ. ಹರ್ಷೇಂದ್ರ ಕುಮಾರ್ ಅವರು ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದರು. ಮೊಕದ್ದಮೆಯಲ್ಲಿ ಮಹೇಶ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಯೂಟ್ಯೂಬರ್ ಎಂ.ಡಿ. ಸಮೀರ್ ಮತ್ತು ಕೆಲವು ಮಾಧ್ಯಮಗಳನ್ನು ಪ್ರತಿವಾದಿಗಳಾಗಿ ಗುರುತಿಸಲಾಗಿದ್ದು, ಅವರ ವಿರುದ್ಧ ಯಾವುದೇ ತಪ್ಪು ಮಾಹಿತಿ ಹರಡದಂತೆ ನಿರ್ದೇಶಿಸಲು ಕೋರಲಾಗಿದೆ.
ಇತ್ತೀಚೆಗೆ ಕೆಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ಧರ್ಮಸ್ಥಳದ ಸುತ್ತಮುತ್ತ ಇತರೆ ವ್ಯಕ್ತಿಗಳ ಮೃತದೇಹ ಹೂತು ಹಾಕಲಾಗಿದೆ ಎಂಬ ಗಂಭೀರ ಆರೋಪದ ಕುರಿತು ಸುದ್ದಿ ಪ್ರಸಾರವಾಗಿದ್ದು, ಇದರ ಪರಿಣಾಮವಾಗಿ ದೇವಾಲಯದ ಪ್ರತಿಷ್ಠೆಗೆ ಧಕ್ಕೆ ಉಂಟಾಗುವಂತಾಗಿದೆ. ಇದರ ಹಿನ್ನೆಲೆಯಲ್ಲಿ ನ್ಯಾಯಾಲಯವು ಯಾವುದೇ ಅವಹೇಳನಕಾರಿ ಹೇಳಿಕೆ ಅಥವಾ ತಪ್ಪು ಮಾಹಿತಿಯನ್ನು ಪ್ರಚುರಪಡಿಸದಂತೆ ಮಧ್ಯಂತರ ಆದೇಶ ನೀಡಿದೆ.