26 July 2025 | Join group

ಮಂಗಳೂರು: ಸಾಧು ಮುಖದಲ್ಲಿ ಕಪಟ - ಸುಗಂಧ ದ್ರವ್ಯ ಬಳಸಿ ಹಣ ವಂಚನೆ, ಜಾಗರೂಕರಾಗಲು ಕರೆ

  • 19 Jul 2025 03:19:57 PM

ಮಂಗಳೂರು: ಹೊರ ರಾಜ್ಯದಿಂದ ಬಂದಿರುವ ನಕಲಿ ಸಾಧುಗಳು ಮಂಗಳೂರು ಪರಿಸರದಲ್ಲಿ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಜಪ್ಪಿನಮೊಗರುದಿಂದ ಪಂಪ್‌ವೆಲ್ ವರೆಗೆ ಗುಜರಾತ್‌ ನಂಬರ್‌ನ ಕಾರಿನಲ್ಲಿ ಪ್ರಯಾಣಿಸುತ್ತಿರುವ 4–5 ಜನರ ಸಾಧು ತಂಡವೊಂದು ಸಾರ್ವಜನಿಕರನ್ನು ದಿಕ್ಕು ಕೇಳುವ ನೆಪದಲ್ಲಿ ನಿಲುಕಿ, ನಂತರ ಮನೋವೈಜ್ಞಾನಿಕ ತಂತ್ರದ ಮೂಲಕ ಹಣ ಕಸಿದುಕೊಳ್ಳುತ್ತಿರುವ ಕುರಿತು ಮಾಹಿತಿ ಬಂದಿದೆ.

 

ಸ್ಥಳೀಯ ವ್ಯಕ್ತಿಯೊಬ್ಬರು ಕಳುಹಿಸಿದ ಆಡಿಯೋ ಸಂದೇಶದ ಪ್ರಕಾರ, ಈ ಸಾಧುಗಳು ದಾರಿ ಕೇಳುವಾಗ ಕಾರಿನೊಳಗೆ ಒಬ್ಬ ಹಿರಿಯ ಸಾಧು ಇದ್ದಾರೆ ಎನ್ನುತ್ತಾರೆ. ಆತನ ಆಶೀರ್ವಾದ ಪಡೆಯುವಂತೆ ಕೇಳಿ, ಆ ಮೂಲಕ ಜನರನ್ನು ವಶಪಡಿಸಿಕೊಳ್ಳುತ್ತಾರೆ. ಆಶೀರ್ವಾದ ನೀಡುವ ಸಂದರ್ಭದಲ್ಲಿ ಕೈಗೆ ಸುಗಂಧಿತ ದ್ರವ್ಯವನ್ನೋ ಅಥವಾ ಗಮನ ತಪ್ಪಿಸುವ ರೀತಿಯ ದ್ರವ್ಯವನ್ನೋ ಬಳಸಿ, ವ್ಯಕ್ತಿಯ ಮನಸ್ಸನ್ನು ಮರೆತುಹೋಗುವ ಸ್ಥಿತಿಗೆ ತರುತ್ತಾರೆ ಎಂದು ಶಂಕಿಸಲಾಗಿದೆ.

 

ಈ ನಂತರ ಅವರು ಊಟಕ್ಕೆ ಸಹಾಯ ಕೇಳುತ್ತಾರೆ. ಆಗ ವ್ಯಕ್ತಿ ತನ್ನ ಬಳಿ ಇರುವ ನಗದು ಅಥವಾ ಬೆಲೆಬಾಳುವ ವಸ್ತುಗಳನ್ನು ಅವರ ಕೈಗೆ ಒಪ್ಪಿಸುತ್ತಾನೆ. ಕೆಲ ಸಮಯದ ನಂತರವೇ ವಂಚಿತನದ ವಿಷಯ ತಿಳಿಯುತ್ತದೆ.

 

ಇಂತಹ ಘಟನೆ ನಿನ್ನೆ ಜಪ್ಪಿನಮೊಗರು ಬಳಿ ನಡೆದಿದೆ ಎಂದು ಹೇಳಲಾಗಿದ್ದು, ಸುಮಾರು 7 ಸಾವಿರ ರೂಪಾಯಿ ವಂಚನೆಗೆ ಒಳಗಾಗಿರುವುದಾಗಿ ವರದಿಯಾಗಿದೆ. ಇಂದಿಗೂ ಕೂಡ ಇದೇ ಪ್ರದೇಶದಲ್ಲಿ ಈ ನಕಲಿ ಸಾಧುಗಳು ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

 

ಸಾರ್ವಜನಿಕರು ಈ ರೀತಿಯ ಅನುಮಾನಾಸ್ಪದ ವ್ಯಕ್ತಿಗಳನ್ನು ಕಂಡರೆ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಅವರು ಹೇಳುವ ಯಾವುದೇ "ಆಶೀರ್ವಾದ", "ಸಹಾಯ", ಅಥವಾ "ಉಡುಗೊರೆ" ಎಂಬ ಮಾತುಗಳಿಗೆ ಮೋಸಪಡುವ ಹಂತಕ್ಕೆ ಹೋಗಬಾರದು ಎಂದು ಮನವಿ ಮಾಡಲಾಗಿದೆ.