ಮಂಗಳೂರು: ಜೀವ ಉಳಿಸುವ ಯಾತ್ರೆ ಆರಂಭವಾದುದು ಮಂಗಳೂರಿನಿಂದ. ಅದರ ಗುರಿ ಇದ್ದಿದ್ದು ಬೆಂಗಳೂರು. ನಡುವೆ 370 ಕಿಲೋಮೀಟರ್, ಘಟ್ಟದ ತಿರುವುಗಳು, ಸಂಚಾರದ ಆತಂಕ – ಮತ್ತು ಮಗುವಿನ ಜೀವನದ ಮೇಲಿನ ಹೊಣೆ. ಈ ಹೊಣೆಯನ್ನು ವಹಿಸಿಕೊಂಡಿದ್ದರು ಸುಳ್ಯದ ಕೆವಿಜಿ ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕ ಹನೀಫ್.
ಜುಲೈ 17ರ ಸಂಜೆ 4 ಗಂಟೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜನ್ಮಜಾತ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಕೇವಲ 15 ದಿನಗಳ ನವಜಾತ ಶಿಶುವಿಗೆ ತುರ್ತು ಚಿಕಿತ್ಸೆ ಅಗತ್ಯವಿತ್ತು. ವೈದ್ಯರು ಸಮಯ ವ್ಯರ್ಥ ಮಾಡದೇ ಮಗುವನ್ನು ಜಯದೇವ ಹೃದಯ ಸಂಸ್ಥೆಗೆ ಕರೆದೊಯ್ಯುವಂತೆ ಸೂಚಿಸಿದರು. ಪೋಷಕರು ತಕ್ಷಣ ಆಂಬ್ಯುಲೆನ್ಸ್ ನೆರವಿಗೆ ಮೊರೆವೊತ್ತಿದರು. ಆ ಸಂದರ್ಭದಲ್ಲಿ ಜೀವನದ ಹೋರಾಟದಲ್ಲಿ ಭಾಗಿಯಾಗುವ 'ಚಾಲಕ' ಬೇಕಾಗಿತ್ತು.
ಮೆಡಿಕಲ್ ಪ್ರೊಟೋಕಾಲ್‌ನ ಪಕ್ಕಾ ಪಾಲನೆಯೊಂದಿಗೆ, ಮಗುವನ್ನು ಸುರಕ್ಷಿತವಾಗಿ ತುಂಬಿಸಿ, ಆಂಬ್ಯುಲೆನ್ಸ್ ಚಾಲನೆಯಾಯಿತು. ಅವರು ಮಂಗಳೂರು, ಪುತ್ತೂರು, ಸುಳ್ಯ, ಮಡಿಕೇರಿ, ಮೈಸೂರು ಹಾದಿಯಾಗಿ ತೂಗು ತಿರುವುಗಳ ಮಧ್ಯೆ ಕ್ಷಣವೂ ನಷ್ಟವಾಗದಂತೆ ಜಾಗರೂಕತೆ, ವೇಗ ಮತ್ತು ಗಮನದ ಮಾದರಿಯಾಗಿ ಚಾಲನೆ ನಡೆಸಿದರು.
ಸಂಜೆ 4 ಗಂಟೆಗೆ ಹೊರಟ ಹನೀಫ್ ರಾತ್ರಿಯ 8.50 ಕ್ಕೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಮಗುವನ್ನು ತಲುಪಿಸಿದರು. ಎಂದರೆ ಕೇವಲ 4 ಗಂಟೆ 50 ನಿಮಿಷಗಳಲ್ಲಿ ಜೀವ ಉಳಿಸುವ ದೌಡಾಯನ!
ಈ ಯಶಸ್ಸಿನ ಹಿಂದೆ ರಸ್ತೆಗಳಲ್ಲಿ ಸಂಚಾರ ತಡೆದ ಪೊಲೀಸರು, ಮುಂಚಿತ ಮಾಹಿತಿ ನೀಡಿದ ಆಸ್ಪತ್ರೆ ಸಿಬ್ಬಂದಿ, ಮಾರ್ಗದರ್ಶನ ಮಾಡಿದ ಶಿವ ಆಂಬ್ಯುಲೆನ್ಸ್‌ನ ಚಾಲಕರಾದ ಶಿವ ಮತ್ತು ಸಮೀರ್, ಮತ್ತು ರಸ್ತೆಯಲ್ಲಿ ಜಾಗೃತವಾಗಿದ್ದ ಸಾರ್ವಜನಿಕರು – ಎಲ್ಲರೂ ಒಂದು ಮಗುವಿನ ಉಸಿರಿಗಾಗಿ ಕೈಜೋಡಿಸಿದರು.
ಆಂಬ್ಯುಲೆನ್ಸ್ ಚಾಲಕರು ಕೇವಲ ಚಾಲಕರಲ್ಲ. ಅವಶ್ಯಕತೆ ಬಂದಾಗ, ಅವರು ಜೀವನದ ಹಾದಿಯಲ್ಲಿನ ನಿಜವಾದ ಹೀರೋಗಳು. ಜನ ಇವರ ಕೆಲಸಕ್ಕಾಗಿ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಪಾಣೆಮಂಗಳೂರು ಹಳೆ ಸೇತುವೆ: ಯಾವ ಸಮಯದಲ್ಲೂ ಬೀಳಬಹುದಾದ ಭೀತಿಯೊಳಗೆ ಜನಜೀವನ!