25 July 2025 | Join group

ಯಕ್ಷಗಾನ ರಂಗಕ್ಕೆ ಮತ್ತೊಂದು ತೀವ್ರ ನಷ್ಟ: ಬಣ್ಣದ ವೇಷಧಾರಿ ಸದಾಶಿವ ಶೆಟ್ಟಿಗಾರ್ ಇನ್ನಿಲ್ಲ

  • 20 Jul 2025 04:31:05 PM

ಬಂಟ್ವಾಳ: ಪ್ರಸಿದ್ಧ ಯಕ್ಷಗಾನ ಕಲಾವಿದ, ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ (60) ಭಾನುವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

 

ತಾಲೂಕಿನ ಸಂಗಬೆಟ್ಟು ಗ್ರಾಮದ ಸಿದ್ಧಕಟ್ಟೆಯಲ್ಲಿ ಜನಿಸಿದ ಸದಾಶಿವರು, ಯಕ್ಷಗಾನ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದವರು. ಬಣ್ಣದ ವೇಷದೊಂದಿಗೆ ನಾಟಕೀಯ ರಾಕ್ಷಸ ಪಾತ್ರಗಳಲ್ಲಿ ಅವರು ಹುಟ್ಟುಹಾಕುತ್ತಿದ್ದ ಜೀವಂತಿಕೆಗೆ ಅಪಾರ ಮೆಚ್ಚುಗೆ ಸಿಕ್ಕಿತ್ತು.

 

ಮಕ್ಕಳಾಗಿಯೇ ಶಾಲೆಗೆ ತೆರಳಿ 6ನೇ ತರಗತಿಯವರೆಗೆ ಶಿಕ್ಷಣ ಪಡೆದು, ಬಳಿಕ ಯಕ್ಷಗಾನವನ್ನೇ ತನ್ನ ಜೀವನ ಶಾಲೆಯಾಗಿ ಆರಿಸಿಕೊಂಡರು. ಅವರು ಕಟೀಲು, ಧರ್ಮಸ್ಥಳ, ಹೊಸನಗರ, ಎಡನೀರು, ಹನುಮಗಿರಿ ಮುಂತಾದ ಮೇಳಗಳಲ್ಲಿ 40 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು.

 

ಅವರು ಪತ್ನಿ ಹಾಗೂ ಮೂರು ಮಕ್ಕಳನ್ನು ಅಗಲಿದ್ದಾರೆ. ಹಿರಿಯ ಕಲಾವಿದರಿಂದ ಯಕ್ಷಗಾನದ ತರಬೇತಿ ಪಡೆದ ಅವರು ಅನೇಕ ಕಲಾವಿದರನ್ನು ತಮ್ಮ ಗರಡಿಯಲ್ಲಿ ಪಳಗಿಸಿದ್ದರು.

 

ಇತ್ತೀಚೆಗಷ್ಟೇ ಮಂಗಳೂರು ವಿಶ್ವವಿದ್ಯಾನಿಲಯದ ‘ಯಕ್ಷಮಂಗಳ’ ಪ್ರಶಸ್ತಿಗೆ ಭಾಜನರಾಗಿದ್ದ ಸದಾಶಿವ ಶೆಟ್ಟಿಗಾರ್ ಅವರಿಗೆ ಹಲವು ಪ್ರಶಸ್ತಿಗಳು, ಸನ್ಮಾನಗಳು ಸಂದಿವೆ.