ಮಂಗಳೂರು: ಧರ್ಮಸ್ಥಳದ ಪುಣ್ಯಕ್ಷೇತ್ರವನ್ನು ಕೆಲವರು ಉದ್ದೇಶಪೂರ್ವಕವಾಗಿ ದೂಷಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿರುವ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಯಾವುದೇ ತೇಜೋವಧೆಗೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.
ಇತ್ತೀಚೆಗೆ ಧರ್ಮಸ್ಥಳದ ಭಾಗದಲ್ಲಿ ಶವಗಳನ್ನು ಹೂತಿರಬಹುದು ಎಂಬ ಗಂಭೀರ ಆರೋಪ ಹಿನ್ನಲೆಯಲ್ಲಿ, ಇಡೀ ಪ್ರಕರಣವನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂಬ ಒತ್ತಡದ ನಡುವೆಯೇ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಅವರು, "ಅನುಮಾನಾಸ್ಪದ ಸಾವುಗಳ ಬಗ್ಗೆ ತಪ್ಪದೇ ನಿಖರ ತನಿಖೆ ನಡೆಯಬೇಕು. ಈಗಾಗಲೇ ಎಸ್ಐಟಿ ರಚನೆಯಾಗಿದೆ. ಯಾರೇ ಆಗಲಿ, ತಪ್ಪಿತಸ್ಥರೆಂದು ದೃಢಪಟ್ಟರೆ ತಪ್ಪಿಲ್ಲದೆ ಕ್ರಮ ಜರುಗುತ್ತದೆ," ಎಂದರು.
ಸಮಗ್ರ ತನಿಖೆಯ ಅಗತ್ಯವಿದೆ ಎಂದ ಸಚಿವರು, ಕೇವಲ ಒಬ್ಬ ಸಾಕ್ಷಿದಾರನ ಹೇಳಿಕೆಗೆ ಆಧಾರವಾಗಿ ತಕ್ಷಣವೇ ನಿರ್ಧಾರಕ್ಕೆ ಬರಲಾಗದು ಎಂದರು. "ಸಾಕ್ಷಿದಾರ ಯಾರು ಎನ್ನುವುದು ಮುಖ್ಯವಲ್ಲ, ಅವರು ಯಾವ ತಾಣದಲ್ಲಿ ಏನು ಹೇಳಿದ್ದಾರೆ ಎನ್ನುವುದು ಮುಖ್ಯ. ಆ ಸ್ಥಳದಲ್ಲಿ ಏನು ನಡೆದಿದ್ದು, ಎಷ್ಟು ಮಟ್ಟಿಗೆ ನಿಜ ಎನ್ನುವುದನ್ನು ಮಾತ್ರ ವೈಜ್ಞಾನಿಕವಾಗಿ ಪರಿಶೀಲಿಸಬೇಕು" ಎಂದು ತಿಳಿಸಿದರು.
ಧರ್ಮಸ್ಥಳ ಕ್ಷೇತ್ರವು ನಂಬಿಕೆಯ ಹಾಗೂ ಶ್ರದ್ಧಾ ಕೇಂದ್ರವಾಗಿದ್ದು, ಯಾರೂ ಕೂಡ ಈ ಸ್ಥಳದ ಪವಿತ್ರತೆಗೆ ಧಕ್ಕೆ ತರುವಂತೆ ಹೇಳಿಕೆ ನೀಡಬಾರದು ಎಂದರು. ಕೆಲವರು ಉದ್ದೇಶಪೂರ್ವಕವಾಗಿ ಪ್ರಚೋದನಾತ್ಮಕ ಮಾತುಗಳಿಂದ ತೇಜೋವಧೆಗೆ ಯತ್ನಿಸುತ್ತಿರಬಹುದು ಎಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದರು.
"ಸೌಜನ್ಯ ಪ್ರಕರಣವಿರಲಿ ಅಥವಾ ಇತರ ಹತ್ಯೆ, ಅತ್ಯಾಚಾರ ಪ್ರಕರಣಗಳೇ ಆಗಿರಲಿ – ಯಾವ್ಯಾವುದೇ ಆಗಿರಲಿ ನ್ಯಾಯ ಸಿಗುತ್ತೆ. ಯಾರೂ ಈ ತನಿಖೆ ಮೇಲೆ ಒತ್ತಡ ಹಾಕಲು ಸಾಧ್ಯವಿಲ್ಲ. ಜನರ ನಂಬಿಕೆಗೆ ಧಕ್ಕೆ ಬಾರದಂತೆ ಮುನ್ನಡೆಯಬೇಕು," ಎಂದು ಅವರು ಭರವಸೆ ನೀಡಿದರು.