ಬೆಳ್ತಂಗಡಿ: ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಶಂಕಿತ ಸರಣಿ ಹತ್ಯೆಗಳ ಹಿನ್ನೆಲೆಯಲ್ಲಿ ರಾಜಕೀಯದಿಂದ ಸಾಮಾಜಿಕ ಮಟ್ಟದವರೆಗೂ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪ್ರಕರಣದ ತನಿಖೆಗೆ ಈಗ ಸರ್ಕಾರ ದೃಢ ಕ್ರಮವೊಂದನ್ನು ಕೈಗೊಂಡಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಈಗ ವಿಶೇಷ ತನಿಖಾ ತಂಡಕ್ಕೆ (SIT) ವರ್ಗಾಯಿಸಿ ಸರ್ಕಾರ ಅಧಿಕೃತ ಆದೇಶವನ್ನು ಹೊರಡಿಸಿದೆ.
ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಈ ತಂಡ ಕಾರ್ಯ ನಿರ್ವಹಿಸಲಿದೆ. ರಾಜ್ಯದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಡಾ. ಪ್ರಣವ್ ಮೊಹಾಂತಿ ಅವರು ಈ ಎಸ್‌ಐಟಿ ತಂಡದ ಮುಖ್ಯಸ್ಥರಾಗಿದ್ದಾರೆ.
ಅವರೊಂದಿಗೆ ಅನುಚೇತ್ (ನೇಮಕಾತಿ ವಿಭಾಗದ ಡಿಜಿಪಿ), ಸೌಮ್ಯಲತಾ (ಸಿಎಆರ್ ಉಪ ಪೊಲೀಸ್ ಕಮಿಷನರ್) ಹಾಗೂ ಜಿತೇಂದ್ರ ಕುಮಾರ್ ದಯಾಮ್ (ಐಪಿಎಸ್) ಅವರನ್ನು ಸದಸ್ಯರಾಗಿ ನೇಮಕ ಮಾಡಲಾಗಿದೆ.
ಈ ತಂಡ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಜೊತೆಗೆ, ರಾಜ್ಯದ ಇತರ ಪೊಲೀಸ್ ಠಾಣೆಗಳಲ್ಲಿ ಈ ಕುರಿತು ದಾಖಲಾಗಿರುವ ಎಲ್ಲ ಪ್ರಕರಣಗಳನ್ನೂ ಸಮಗ್ರವಾಗಿ ಪರಿಶೀಲಿಸಿ ತನಿಖೆ ನಡೆಸಲಿದೆ. ಅತೀ ಶೀಘ್ರದಲ್ಲಿ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂಬ ಸೂಚನೆಯೂ ಸರ್ಕಾರದ ಆದೇಶದಲ್ಲಿ ನೀಡಲಾಗಿದೆ.