24 July 2025 | Join group

ಶಾರ್ಜಾದಲ್ಲಿ ಕೇರಳ ಮೂಲದ ಮಹಿಳೆಯ ಶವ ಪತ್ತೆ: ಪತಿಯ ವಿರುದ್ಧ ಕೊಲೆ ಆರೋಪ

  • 22 Jul 2025 12:29:09 AM

ಶಾರ್ಜಾ: ಯುಎಇಯ ಶಾರ್ಜಾದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಕೊಲ್ಲಂ ಮೂಲದ 29 ವರ್ಷದ ಅತುಲ್ಯ ಶೇಖರ್ ಎಂಬ ಮಹಿಳೆಯು ಶವವಾಗಿ ಪತ್ತೆಯಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಈ ಕುರಿತು ಮಹಿಳೆಯ ತಾಯಿ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.

 

ಅತುಲ್ಯ ಶೇಖರ್ ಅವರು 2014ರಲ್ಲಿ ಕೊಲ್ಲಂ ನಿವಾಸಿ ಶೇಖರ್ ಎಂಬವರನ್ನು ವಿವಾಹವಾಗಿದ್ದು, ನಂತರ ದಂಪತಿ ಶಾರ್ಜಾದ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು. ಮದುವೆಯ ಸಂದರ್ಭ, ಅತುಲ್ಯಗೆ 320 ಗ್ರಾಂ ಚಿನ್ನಾಭರಣ ಹಾಗೂ ಒಂದು ಬೈಕ್ ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

 

ಆದರೆ ಮದುವೆಯಾದ ಬಳಿಕದಿಂದಲೇ ಪತಿ ಶೇಖರ್ ಅವರು ಅತುಲ್ಯಗೆ ವರದಕ್ಷಿಣೆಯ ಕಿರುಕುಳ ನೀಡುತ್ತಿದ್ದರೆಂದು ಮೃತ ಮಹಿಳೆಯ ತಾಯಿ ಆರೋಪಿಸಿದ್ದಾರೆ. ಜೊತೆಗೆ, ಜುಲೈ 18 ಮತ್ತು 19ರ ನಡುವಿನ ರಾತ್ರಿ ವೇಳೆ ಶೇಖರ್ ಅವರು ಪತ್ನಿ ಅತುಲ್ಯಗೆ ಉಸಿರುಗಟ್ಟುವಂತೆ ಮಾಡಿ, ಹೊಟ್ಟೆಗೆ ಒದ್ದು, ತಲೆಗೆ ತಟ್ಟೆಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.

 

ಈ ಸಂಬಂಧ ಶಾರ್ಜಾ ಪೊಲೀಸರು ಶೇಖರ್ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿಸಿದೆ. ಮೃತದೇಹವನ್ನು ಪೋಸ್ಟ್‌ಮಾರ್ಟಂಗಾಗಿ ಸ್ಥಳೀಯ ಆಸ್ಪತ್ರೆಗೆ ಕಳುಹಿಸಲಾಗಿದೆ. ಭಾರತೀಯ ರಾಯಭಾರಿ ಕಚೇರಿ ಹಾಗೂ ಕೇರಳ ಸರ್ಕಾರ ಈ ಪ್ರಕರಣದ ಬಗ್ಗೆ ಗಮನಹರಿಸಬೇಕು ಎಂಬ ಆಗ್ರಹ ಮೃತ ಮಹಿಳೆಯ ಕುಟುಂಬದಿಂದ ಕೇಳಿ ಬಂದಿದೆ.