ಬೆಂಗಳೂರು: ಧರ್ಮಸ್ಥಳದ ಕುರಿತು ದಿನನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಪಪ್ರಚಾರದ ಹಿಂದಿದ್ದ ಯೋಗ್ಯತೆಯನ್ನು ಪ್ರಶ್ನಿಸಿರುವ ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಆರ್. ಅಶೋಕ್, "ಈ ಘಟನೆ ಹಿಂದಿದೆ ಎನ್ನಲಾಗುತ್ತಿರುವ ವ್ಯಕ್ತಿ ಮುಸ್ಲಿಂ ಯುವಕನೊಬ್ಬ. ವಿಷಯ ಕರ್ನಾಟಕದದು, ಆದರೆ ಇದರಲ್ಲಿ ಕೇರಳದ ಕಮ್ಯುನಿಸ್ಟ್ ಸರ್ಕಾರ ಎಲ್ಲಿಂದ ಬಂತು?" ಎಂದು ಪ್ರಶ್ನಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, " ತಿರುಪತಿ ಮತ್ತು ಧರ್ಮಸ್ಥಳ ಹಿಂದುಗಳಿಗೆ ಪವಿತ್ರ ಕ್ಷೇತ್ರಗಳಾಗಿರುವುದನ್ನು ಸ್ಮರಿಸುತ್ತ, ಧರ್ಮಸ್ಥಳದ ಬಗ್ಗೆ ನಡೆಸಲಾಗುತ್ತಿರುವ ದೈನಂದಿನ ಅಪಪ್ರಚಾರ ಹಿಂದೂ ಭಕ್ತರ ಭಾವನೆಗೆ ತೀವ್ರ ನೋವನ್ನು ಉಂಟು ಮಾಡುತ್ತಿದೆ" ಎಂದು ಆತಂಕ ವ್ಯಕ್ತಪಡಿಸಿದರು.
ದಕ್ಷಿಣ ಭಾರತದಲ್ಲಿ ತಿರುಪತಿ ಮತ್ತು ಧರ್ಮಸ್ಥಳ ಹಿಂದುಗಳಿಗೆ ಬಹಳ ಪವಿತ್ರವಾದ ಸ್ಥಳಗಳು. ಆದರೆ ನನಗೆ ಇಲ್ಲಿ ಎಲ್ಲೋ ಒಂದು ಅನುಮಾನ ವ್ಯಕ್ತವಾಗುತ್ತಿದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನವೂ ಧರ್ಮಸ್ಥಳ ಸಂಬಂಧಿತ ವಿಡಿಯೋಗಳು ಅಪ್ಲೋಡ್ ಆಗುತ್ತಿವೆ. ಇದನ್ನು ಅಪ್ಲೋಡ್ ಮಾಡುತ್ತಿರುವವರು ಯಾರು ಅನ್ನೋದು ಗಮನಿಸಿದ್ರೆ – ಅದು ಒಬ್ಬ ಮುಸ್ಲಿಂ ಯುವಕ. ಇದು ಕರ್ನಾಟಕಕ್ಕೆ ಸಂಬಂಧಪಟ್ಟ ವಿಷಯವಾಗಿದೆ. ಆದರೆ ಇದರಲ್ಲಿ ಕೇರಳದ ಕಮ್ಯುನಿಸ್ಟ್ ಸರ್ಕಾರ ಏಕೆ ಮಧ್ಯ ಪ್ರವೇಶ ಮಾಡುತ್ತಿದೆ ಅನ್ನೋದು ನನಗೆ ಅರ್ಥ ಆಗುತ್ತಿಲ್ಲ ಎಂದು ತಿಳಿಸಿದರು.
ಕೇರಳ ಸರ್ಕಾರ ತಮ್ಮ ರಾಜ್ಯದ ದೇವಸ್ಥಾನಗಳನ್ನು ಹೇಗೆ ನಿರ್ವಹಿಸುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅಯ್ಯಪ್ಪ ದೇವಾಲಯದ ವಿಚಾರದಲ್ಲಿ ಅವರು ಮಾಡಿರುವ ಅವಮಾನಗಳೂ ಈಗ ಜಗಜಾಹೀರಾಗಿವೆ. ಇಲ್ಲಿ ನನ್ನ ಆಶ್ಚರ್ಯ ಎಂದರೆ – ಈ ಕುರಿತು ನೂರಾರು, ಸಾವಿರಾರು ಜನರು ಬೇರೆ ಬೇರೆ ರಾಜ್ಯಗಳಲ್ಲಿ ಕಂಪ್ಲೇಂಟ್ ನೀಡಿರಬೇಕು. ಹೀಗಿರುವಾಗ, ಇಂತಹ ಸಂವೇದನಾಶೀಲ ಪ್ರಕರಣಗಳಲ್ಲಿ ಯಾವುದೇ ಪೊಲೀಸ್ ಅಧಿಕಾರಿಗಳು ಅಚಾತುರ್ಯ ವರ್ತಿಸುವುದಿಲ್ಲ ಎಂಬುದು ನನಗೆ ಗೊತ್ತಿದೆ ಎಂದರು.
ಇದೊಂದು ಪವಿತ್ರ ಸ್ಥಳ, 'ಮಂಜುನಾಥ, ಮಂಜುನಾಥ' ಅಂತ ಪ್ರತಿದಿನವೂ ಹೇಳುವ ಧರ್ಮಸ್ಥಳವನ್ನು ಟಾರ್ಗೆಟ್ ಮಾಡುವುದು ಹಿಂದೂಗಳ ಭಾವನೆಗೆ ನೋವುಂಟುಮಾಡುತ್ತದೆ. ದಿನ ನಿತ್ಯವಾಗಿ ಇಂತಹ ಅಪಪ್ರಚಾರ ನಡೆಯುತ್ತಿರುವುದು ಸರಿಯಲ್ಲ." ಎಂದು ರಾಜ್ಯ ಸರಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.