ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದ ಘಟನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಬಲ ಹೇಳಿಕೆ ನೀಡಿದರು. ಅವರು ಸ್ಪಷ್ಟವಾಗಿ ಯಾವುದೇ ಧರ್ಮದ ರಾಜಕಾರಣ ಇಲ್ಲ ಎಂದು ಅಭಿಪ್ರಾಯಪಟ್ಟರು. ನ್ಯಾಯಾಲಯದಲ್ಲಿ 15 ವರ್ಷಗಳ ಬಳಿಕ ದಾಖಲಾಗಿರುವ ಹೇಳಿಕೆಯನ್ನು ಆಧರಿಸಿ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಈಗ ಈ ಪ್ರಕರಣವನ್ನು ಗೃಹ ಸಚಿವರು ಸ್ವತಃ ನೋಡಿಕೊಳ್ಳುತ್ತಿದ್ದಾರೆ. ಒಳ್ಳೆಯ ಹಿರಿಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಅನುಭವವಂತ ಅಧಿಕಾರಿಗಳನ್ನು ನೇಮಿಸಿ, ಖಂಡಿತವಾಗಿಯೂ ತನಿಖೆಗೆ ಬೇಕಾದ ಎಲ್ಲವನ್ನೂ ಮಾಡುವವರಿದ್ದಾರೆ. ಬಿಜೆಪಿಯವರು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಹೇಳಲಿ, ಹಾಗೆ ನಡೆದುಕೊಳ್ಳೋಣ ಎಂದು ನುಡಿದರು.
"ನನಗೆ ಎಲ್ಲಿಂದಲೂ ಧರ್ಮದ ರಾಜಕೀಯ ಕಾಣಿಸುತ್ತಿಲ್ಲ. ಮಾಧ್ಯಮದವರು ಕೇಳುತ್ತಿರುವ ಪ್ರಶ್ನೆಗಳ ಭಾಷೆಯೇ ನನಗೆ ಅರ್ಥವಾಗುತ್ತಿಲ್ಲ. ಬಿಜೆಪಿ ಮುಖಂಡರ ಭಾಷೆಯೂ ಅರ್ಥವಾಗುತ್ತಿಲ್ಲ. ಯಾರೋ ಹೋಗಿ 15 ವರ್ಷಗಳ ಬಳಿಕ ಕೋರ್ಟ್‌ನಲ್ಲಿ ನೀಡಿರುವ ಹೇಳಿಕೆಯ ವಿಚಾರ ನನಗೆ ಗೊತ್ತಿದೆ. ಸತ್ಯವೇನು, ಅಸತ್ಯವೇನು ಎಂಬುದನ್ನು ತಿಳಿಯಲು ಸರ್ಕಾರವು ಎಸ್‌ಐಟಿ ರಚಿಸಿದೆ. ಸತ್ಯ ಹೊರಬರುತ್ತದೆ."
"ಮಾಧ್ಯಮದವರು ಈ ವಿಷಯವನ್ನು ದೊಡ್ಡ ವಿಚಾರವನ್ನಾಗಿ ಪರಿಗಣಿಸುತ್ತಿದ್ದರೆ, ನಮಗೂಅವರಿಗೆ ಗೌರವ ಸಲ್ಲಿಸಬೇಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಕ್ಕೂ ಹೆಚ್ಚು ಜವಾಬ್ದಾರಿ ಇದೆ. ಸಮಾಜಕ್ಕೂ ನ್ಯಾಯ ಕೊಡಬೇಕು, ಸರ್ಕಾರಕ್ಕೂ ನ್ಯಾಯ ಕೊಡಬೇಕು, ವಿರೋಧ ಪಕ್ಷದ ಧ್ವನಿಯನ್ನೂ ಆಲಿಸಬೇಕು. ಅವರ ಹಿತವಚನಗಳನ್ನೂ ನುಡಿಮುತ್ತುಗಳನ್ನೂ ಕೇಳಬೇಕು — ಇದು ನಮ್ಮೆಲ್ಲರ ಆದರ್ಶ." ಎಂದು ಮಾಧ್ಯಮಗಳ ಪ್ರಶೆಗಳಿಗೆ ಉತ್ತರಿಸುತ್ತಾ ತಿಳಿಸಿದ್ದಾರೆ.