23 July 2025 | Join group

ಮಂಗಳೂರಿನ ಶಾಲೆಯೊಂದರಲ್ಲಿ ಲಾಸ್ಟ್‌ ಬೆಂಚ್ ತತ್ವಕ್ಕೆ ಗುಡ್‌ ಬೈ : ಸ್ಥಳೀಯರ ಶ್ಲಾಘನೆ

  • 23 Jul 2025 12:21:40 AM

ಮಂಗಳೂರು: "ಲಾಸ್ಟ್‌ ಬೆಂಚ್‌ ವಿದ್ಯಾರ್ಥಿಗಳು ದಡ್ಡರು, ಫಸ್ಟ್‌ ಬೆಂಚ್‌ವರೆ ಜಾಣರು" ಎಂಬ ಹಳೆಯ ನಂಬಿಕೆಗೆ ಮಂಗಳೂರಿನ ಮುಡಿಪು ಸಮೀಪದ ಬಾಳೆಪುನಿ ಗ್ರಾಮದ ಹೂಹಾಕುವ ಕಲ್ಲು ಪಿಎಂಶ್ರೀ ದ.ಕ.ಜಿಪಂ ಹಿರಿಯ ಪ್ರಾಥಮಿಕ ಶಾಲೆಯೊಂದು ಕಡ್ಡಾಯ ವಿರಾಮ ನೀಡಿದೆ.

 

ಈ ಶಾಲೆಯ ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ ಅವರು ಕೇರಳದ ಮಾದರಿಯನ್ನು ಅಳವಡಿಸಿಕೊಂಡು 'U' ಆಕಾರದ ಬೆಂಚ್ ವ್ಯವಸ್ಥೆ ಪರಿಚಯಿಸಿದ್ದಾರೆ. ಇದರ ಮೂಲಕ "ಲಾಸ್ಟ್‌ ಬೆಂಚ್" ಅನ್ನೋ ತತ್ವವನ್ನೇ ಶಾಲೆಯ ಡಿಸೈನ್ ನಿಂದ ತೆಗೆದುಹಾಕಲಾಗಿದೆ.

 

ಶಾಲೆಯ 18 ತರಗತಿಗಳಲ್ಲಿ 9 ತರಗತಿಗಳ ಬೆಂಚ್‌ ಮತ್ತು ಡೆಸ್ಕ್‌ಗಳನ್ನು U ಮಾದರಿಯಲ್ಲಿ ಜೋಡಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ನೇರ ಸಂಪರ್ಕ ಸಾಧ್ಯವಾಗಿದ್ದು, ಎಲ್ಲರೂ ಸಮಾನವಾಗಿ ಪಾಠದಲ್ಲಿ ಪಾಲ್ಗೊಳ್ಳಲು ಸಹಾಯವಾಗಿದೆ.

 

ಈ ಹೊಸ ವ್ಯವಸ್ಥೆಯು ಶಾಲೆಯ 545 ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ನೀಡುತ್ತಿದೆ. ಕೆಲವು ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಇದ್ದು ಸ್ಥಳದ ಅಭಾವದಿಂದ ಈ ವ್ಯವಸ್ಥೆ ಸಾಧ್ಯವಾಗಿಲ್ಲ.

 

ಈ ಶೈಲಿಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ ಸಿಗುತ್ತಿರುವುದು ಗಮನಾರ್ಹ. ಮುಖ್ಯಶಿಕ್ಷಕಿ ವಿಜಯಲಕ್ಷ್ಮಿಯವರ ಹೊಸ ಪ್ರಯತ್ನಕ್ಕೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.