ಕಲ್ಲಡ್ಕ: ತುಳುನಾಡಿನ ಪ್ರಖ್ಯಾತ ರಂಗಕಲಾವಿದ ರಮೇಶ್ ಕಲ್ಲಡ್ಕ (68) ಅವರು ಇಂದು ಮುಂಜಾನೆ ಹೃದಯಾಘಾತದಿಂದ ಅಗಲಿದ್ದಾರೆ.
ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ರಂಗಭೂಮಿಗೆ ನಿಷ್ಠೆಯಿಂದ ಸೇವೆ ಸಲ್ಲಿಸಿದ ರಮೇಶ್ ಕಲ್ಲಡ್ಕ ಕಳೆದ ಎರಡು ದಶಕಗಳಿಂದ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಕಲಾಸಂಗಮದಲ್ಲಿ ಪ್ರಮುಖ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಕೊಡಿಯಾಲ್ ಬೈಲ್ ಅವರ ಮಾರ್ಗದರ್ಶನದಲ್ಲಿ ಕಲಿತ ರಮೇಶ್ ಅವರು ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳಲ್ಲಿ ಜೀವಂತ ಅಭಿನಯದಿಂದ ಎಲ್ಲರ ಮನ ಗೆದ್ದಿದ್ದರು.
ಖಾಸಾಗಿ “ಶಿವದೂತಗುಳಿಗೆ” ನಾಟಕದಲ್ಲಿ ಭೀಮಾರಾವ್ ಪಾತ್ರ ಅವರ ಹೆಸರಿಗೆ ವಿಭಿನ್ನ ಪರಿಚಯ ಕೊಟ್ಟರೆ, “ಶಿವಾಜಿ” ನಾಟಕದಲ್ಲಿ ಅವರು ನಿರ್ವಹಿಸಿದ ದಾದ ಕೊಂಡೆಯ ಪಾತ್ರವೂ ಅಪಾರ ಮೆಚ್ಚುಗೆ ಪಡೆದಿತ್ತು.
ಸರಳತೆ, ಸೌಮ್ಯತೆ ಮತ್ತು ಶಿಸ್ತಿಗೆ ನಿದರ್ಶನರಾಗಿದ್ದ ರಮೇಶ್ ಅವರು ಕಲಾಸಂಗಮದ ತಂಡದೊಂದಿಗೆ ಮುಂಬೈ, ಬೆಂಗಳೂರು ಸೇರಿದಂತೆ ಹಲವು ಸ್ಥಳಗಳಲ್ಲಿ ನಾಟಕ ಪ್ರದರ್ಶನ ನೀಡಿದ ಅನುಭವ ಹೊಂದಿದ್ದರು.
ಅವರ ನಿಧನ ತುಳುರಂಗಭೂಮಿಗೆ ಆಘಾತಕಾರಿ ನಷ್ಟವಾಗಿದ್ದು, ಹಲವು ಕಲಾಸಾಂಸ್ಥೆಗಳು ಮತ್ತು ಕಲಾಪ್ರಿಯರು ಗಂಭೀರ ಸಂತಾಪ ವ್ಯಕ್ತಪಡಿಸಿದ್ದಾರೆ.