ಇಸ್ಲಾಮಾಬಾದ್: ಪಾಕಿಸ್ತಾನದ ಮೂಲದ ಭಯೋತ್ಪಾದನೆ ಸಂಘಟನೆಯಾದ ಲಷ್ಕರ-ಎ-ತೈಬಾದ ಪ್ರಮುಖ ಕಾರ್ಯತಂತ್ರದ ಸದಸ್ಯನಾಗಿದ್ದ ಮತ್ತು ಭಯೋತ್ಪಾದನಾ ಸಂಘಟನೆಯ ಹಣಕಾಸು ಕಾರ್ಯಾಚರಣೆಯ ಉಸ್ತುವಾರಿ ಆಗಿದ್ದ ಉಗ್ರ ಅಬ್ದುಲ್ ಅಜೀಜ್ ಸಾವನ್ನಪ್ಪಿದ್ದಾನೆ.
ಅಬ್ದುಲ್ ಅಜೀಜ್ ಭಾರತದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ. ದಾಳಿಗಳಲ್ಲಿ ನೇರವಾಗಿ ಕಾರ್ಯಾಚರಣೆ ಮಾಡದೇ ಇದ್ದರೂ, ದಾಳಿಗೆ ಬೇಕಾದ ನಿಧಿ ಮತ್ತು ಇನ್ನಿತರ ಸಂಪನ್ಮೂಲ ಒದಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ.
2001 ರ ಸಂಸತ್ ಭವನದ ಮೇಲೆ ನಡೆದ ದಾಳಿಗೆ ಪಾಕಿಸ್ತಾನದಿಂದ ಹಣ ಮತ್ತು ಉಪಕರಣಗಳನ್ನು ಸಾಗಿಸಲು ಸಹಾಯ ಮಾಡಿದ್ದ ಎಂಬ ವರದಿ ಗುಪ್ತಚರ ಇಲಾಖೆಯಿಂದ ಹೊರಬಿದ್ದಿದೆ.
2006 ರ ಮುಂಬೈ ರೈಲು ಸ್ಫೋಟ ಮತ್ತು 2008 ರ ಮುಂಬೈ ದಾಳಿಗೆ ಹಣಕಾಸು ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉಗ್ರ ಅಬ್ದುಲ್ ಅಜೀಜ್.
ಕಳೆದ ಮೇ, 7 ರಂದು ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ವೇಳೆ ಕ್ಷಿಪಣಿ ದಾಳಿಗೆ ತುತ್ತಾಗಿ ಗಾಯಗೊಂಡಿದ್ದ ಈತ, ಪಾಕಿಸ್ತಾನದ ಬಹಾವಲ್ಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.