ಮಂಗಳೂರು: ಈಗಾಗಲೇ ಅತಿಯಾದ ಮಳೆಯ ಪ್ರಭಾವದಿಂದ ತತ್ತರಿಸಿ ಹೋಗಿರುವ ದಕ್ಷಿಣ ಕನ್ನಡ ಮತ್ತು ಕರಾವಳಿಯ ಇನ್ನಿತರ ಭಾಗಗಳಲ್ಲಿ ಮುಂದಿನ ದಿನ ಮತ್ತಷ್ಟು ಗಾಳಿ ಮಳೆಯ ಸಾಧ್ಯತೆ ಇದೆ. ಹವಾಮಾನ ಇಲಾಖೆ ತಿಳಿಸಿರುವ ಪ್ರಕಾರ, ಜುಲೈ 27ರ ವರೆಗೆ ಕರಾವಳಿ ಭಾಗಗಳಲ್ಲಿ ಗಾಳಿ ಸಹಿತ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಈಗಾಗಲೇ ಜನರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ತಿಳಿಸಿದೆ. ಅತಿಯಾಗಿ ಗಾಳಿ ಮಳೆ ಬೀಸುವ ಸಾಧ್ಯತೆ ಇರುವುದರಿಂದ ಮಕ್ಕಳು ಮತ್ತು ಕಾರ್ಮಿಕರು ಮಳೆ, ಗಾಳಿ ಅಥವಾ ಸಿಡಿಲು ಇರುವಾಗ ಹೊರಗಡೆ ಕಾಲಿಡಬಾರದು ಎಂದು ತಿಳಿಸಿದೆ.
ಸಾರ್ವಜನಿಕರು, ಪ್ರವಾಸಿಗಳು ಮತ್ತು ಮೀನುಗಾರರಿಗೆ ಸೂಚನೆ ನೀಡಲಾಗಿದ್ದು, ಕೃಷಿಕರು ಮಳೆ ಸಿಡಿಲಿನಂತಹ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಂದ ದೂರ ಇರಬೇಕಾಗಿ ತಿಳಿಸಲಾಗಿದೆ. ಅಪಾಯಕಾರಿ ಮರಗಳು, ವಿದ್ಯುತ್ ಕಂಬಗಳ ಬಳಿ ಹೋಗಬಾರದು ಮತ್ತು ಹಳೆಯದಾದ ಕಟ್ಟಡಗಳಲ್ಲಿ ವಾಸ ಅಥವಾ ಅದರ ಹತ್ತಿರ ನಿಲ್ಲಬಾರದು ಎಂದು ಸೂಚನೆ ನೀಡಿದೆ.
ಭೂ ಕುಸಿತ ಸಾಧ್ಯತೆ ಹೆಚ್ಚಾಗಿ ಇರುವುದರಿಂದ, ಸ್ಥಳೀಯ ಅಧಿಕಾರಿಗಳು ಹೈ ಅಲರ್ಟ್ ನಲ್ಲಿ ಇರಬೇಕು ಎಂದು ನಿರ್ದೇಶನ ನೀಡಲಾಗಿದೆ.