ಪದ್ಮಲತಾ, ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪದ ಬೊಳ್ಯಾರು ಗ್ರಾಮದ ಕಾಲೇಜು ವಿದ್ಯಾರ್ಥಿನಿ, 1986ರ ಡಿಸೆಂಬರ್ 22ರಂದು ನಾಪತ್ತೆಯಾಗಿದ್ದರು. ಸುಮಾರು 56 ದಿನಗಳ ನಂತರ ನೇತ್ರಾವತಿ ನದಿಯಲ್ಲಿ ಕೈಕಾಲು ಕಟ್ಟಿ ಬಿಸಾಡಲಾಗಿದ್ದ ಶವ ಪತ್ತೆಯಾಗಿದ್ದು, ಸಾವಿನಲ್ಲಿ ಅನುಮಾನದ ಹೊಗೆ ಎದ್ದಿತ್ತು.
ಪದ್ಮಲತಾರ ಶವ ಪತ್ತೆಯಾದ ಬಳಿಕ, ಸ್ಥಳೀಯವಾಗಿ ಸಿಪಿಎಂ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಬ್ಬರು ತಕ್ಷಣ ಮಂಗಳೂರಿನ ತಮ್ಮ ಕಚೇರಿಗೆ ಭೇಟಿ ನೀಡಿದರೆಂದು ಹೇಳಲಾಗಿದೆ. ಆ ಕಚೇರಿಯಲ್ಲಿ ಹಿರಿಯರು ನೀಡಿದ ಸೂಚನೆಯಂತೆ, ಶವವನ್ನು ಯಾವುದೇ ಕಾರಣಕ್ಕೂ ಸುಡಬೇಡಿ ಎಂದು ತೀವ್ರವಾಗಿ ಸೂಚನೆ ನೀಡಲಾಗಿತ್ತು. ಸುಡುವ ಬದಲಿಗೆ, ಶವವನ್ನು ಹೂತುಹಾಕಿ ಮತ್ತು ಆ ಸ್ಥಳಕ್ಕೆ ರಕ್ಷಣೆಯನ್ನೂ ಒದಗಿಸಲು ಅವರು ತಿಳಿಸಿದ್ದರು ಎನ್ನಲಾಗಿದೆ.
ಮುಂದಿನ ದಿನಗಳಲ್ಲಿ ತನಿಖೆಯ ಅವಶ್ಯಕತೆ ಉಂಟಾದರೆ, ಶವದ ಪೋಸ್ಟ್‌ಮಾರ್ಟಮ್ ಮಾಡುವ ಅಗತ್ಯ ಬರುತ್ತದೆ ಎಂಬ ಕಾರಣದಿಂದ ಹಾಗೂ ಪಕ್ಷದ ಹಿರಿಯರ ಸಲಹೆಯಿಂದ ಪದ್ಮಲತಾ ಅವರ ತಂದೆ ಮತ್ತು ಸ್ನೇಹಿತರು ಶವವನ್ನು ಸುಡುವ ಬದಲು ಹೂತುಹಾಕಲು ನಿರ್ಧಾರ ತೆಗೆದುಕೊಂಡಿದ್ದರು ಎಂದು ಮಂಗಳೂರಿನ ಸ್ಥಳೀಯ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಅವರು ತಿಳಿಸಿದ್ದಾರೆ.
ಆದರೆ ಇತ್ತೀಚೆಗೆ ಧರ್ಮಸ್ಥಳದ ಪೂರ್ವ ಕಾರ್ಮಿಕನೊಬ್ಬನು 1995ರಿಂದ 2014ರ ಅವಧಿಯಲ್ಲಿ ತಾನು ಹೂತು ಹಾಕಿದ ಶವಗಳ ಪ್ರಕರಣಗಳ ಬಗ್ಗೆ ಬಹಿರಂಗಪಡಿಸಿದ ಕಾರಣದಿಂದ ಈ ಪ್ರಕರಣ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ರಚನೆಯಾದ ವಿಶೇಷ ತನಿಖಾ ತಂಡ (SIT) ಪದ್ಮಲತಾ ಪ್ರಕರಣವನ್ನೂ ತನಿಖೆಗೆ ಒಳಪಡಿಸಬೇಕೆಂಬ ಒತ್ತಡ ಹೆಚ್ಚಾಗಿದೆ.
ಹಲವು ರಾಜಕೀಯ ಪಕ್ಷಗಳು, ಸಾಮಾಜಿಕ ಹೋರಾಟಗಾರರು ಹಾಗೂ ಮೌಲ್ಯಾಧಾರಿತ ಸಂಘಟನೆಗಳು ಈ ಪ್ರಕರಣದಲ್ಲಿ ನ್ಯಾಯ ಒದಗಿಸಲು ಆಗ್ರಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪದ್ಮಲತಾ ಅವರ ಕುಟುಂಬಕ್ಕೆ ಈ ಬಾರಿ ನ್ಯಾಯ ಸಿಗಬಹುದೆಂಬ ನಿರೀಕ್ಷೆ ಮೂಡಿದೆ.