ಭಾರತದ ಪ್ರಧಾನಿ ನರೇಂದ್ರ ಮೋದಿ, ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರನ್ನು ಭೇಟಿ ಮಾಡಿ ಮಹತ್ತರ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಎರಡು ದೇಶಗಳ ನಡುವಿನ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇದು ಒಂದು 'ಐತಿಹಾಸಿಕ ದಿನ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಾರತ ಮತ್ತು ಯುಕೆ ಮುಕ್ತ ವ್ಯಾಪಾರ ಒಪ್ಪಂದದಿಂದ ಆಮದು ಸುಂಕ ಕಡಿಮೆಯಾಗಲಿದೆ. 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸಲಿದೆ. ಹಲವು ಸರಕುಗಳು ಅಗ್ಗವಾಗಲಿದೆ. ಸ್ಕಾಚ್, ವಿಸ್ಕಿ, ಜಿನ್ ನಂತಹ ಮದ್ಯಪಾನಗಳ ಮೇಲಿನ ಆಮದು ಸುಂಕವು ಮತ್ತು ಯುಕೆನಲ್ಲಿ ತಯಾರಾಗುವ ಜಾಗ್ವಾರ್, ಲ್ಯಾಂಡ್ ರೋವರ್ ನಂತಹ ಕಾರುಗಳ ಮೇಲಿನ ಸುಂಕವು ಗಣನೀಯವಾಗಿ ಕಡಿಮೆಯಾಗಲಿದೆ.
ಮುಕ್ತ ವ್ಯಾಪಾರ ಒಪ್ಪಂದದ ಕುರಿತು, ಭಾರತದ ಕೃಷಿ ಉತ್ಪನ್ನಗಳು ಮತ್ತು ಸಂಸ್ಕರಿಸಿದ ಆಹಾರ ಉದ್ಯಮಕ್ಕೆ ಬ್ರಿಟಿಷ್ ಮಾರುಕಟ್ಟೆಯಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಯಾಗಲಿದೆ ಮತ್ತು ಇದು ಭಾರತದ ಯುವಕರು, ರೈತರು, ಮೀನುಗಾರರು ಮತ್ತು ಎಂಎಸ್‌ಎಂಇ ವಲಯಕ್ಕೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತೀಯ ಜವಳಿ, ಪಾದರಕ್ಷೆಗಳು, ರತ್ನಗಳು ಮತ್ತು ಆಭರಣಗಳು, ಸಮುದ್ರಾಹಾರ ಮತ್ತು ಎಂಜಿನಿಯರಿಂಗ್ ಸರಕುಗಳು ಯುಕೆಯಲ್ಲಿ ಉತ್ತಮ ಮಾರುಕಟ್ಟೆ ಪ್ರವೇಶವನ್ನು ಪಡೆಯುತ್ತವೆ ಎಂದು ಅವರು ತಿಳಿಸಿದರು. ವೈದ್ಯಕೀಯ ಉಪಕರಣಗಳು, ಎಲೆಕ್ಟ್ರಿಕಲ್ ಯಂತ್ರೋಪಕರಣಗಳು, ಆಹಾರ ಪದಾರ್ಥಗಳು, ಸೌಂದರ್ಯವರ್ಧಕಗಳ ಬೆಲೆಗಳು ಕೂಡ ಕಡಿಮೆಯಾಗಲಿದೆ.
ಕಳೆದ ತಿಂಗಳು ಅಹ್ಮದಾಬಾದ್ ನಲ್ಲಿ ನಡೆದ ವಿಮಾನ ದುರಂತದ ಸಂದರ್ಭದಲ್ಲಿ ಮೃತಪಟ್ಟ ಬ್ರಿಟಿಷ್ ನಾಗರಿಕರ ಬಗ್ಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದರು.