26 July 2025 | Join group

ಮಂಗಳೂರು: ಮಳೆಯ ನಡುವೆ ಆನ್ಲೈನ್ ತರಗತಿ - ಕೊರೊನಾ ಯುಗದ ನೆನಪು ಮತ್ತೊಮ್ಮೆ ಜೀವಂತ!

  • 25 Jul 2025 01:01:22 AM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಏಳು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಶಾಲೆಗಳಿಗೆ ಬಿಡದೆ ರಜೆ ಘೋಷಣೆಯಾಗುತ್ತಿದೆ. ಈ ಪರಿಣಾಮವಾಗಿ ಕೆಲ ಶಾಲೆಗಳು ಇದೀಗ ಮತ್ತೆ ಆನ್‌ಲೈನ್ ತರಗತಿಗಳ ಮೊರೆ ಹೋಗಿದ್ದು, ಕೊರೊನಾ ಕಾಲದ ಅಧ್ಯಯನ ವ್ಯವಸ್ಥೆಯನ್ನು ನೆನಪಿಸುವಂತಾಗಿದೆ.

 

ಮಂಗಳೂರು ನಗರದ ಕೆಲ ಶಾಲೆಗಳು ಈಗಾಗಲೇ ಆನ್‌ಲೈನ್ ಕ್ಲಾಸ್‌ಗಳನ್ನು ಆರಂಭಿಸಿವೆ. ಇನ್ನು ಕೆಲವು ಶಾಲೆಗಳು ತರಗತಿಗಳನ್ನು ಆನ್‌ಲೈನ್‌ ಮೂಲಕ ನಡೆಸುವ ತಯಾರಿಯಲ್ಲಿ ಇದ್ದು, ಮುಂದಿನ ದಿನಗಳಲ್ಲಿ ಶಾಲಾ ಪಠ್ಯಕ್ರಮ ಪೂರ್ಣಗೊಳಿಸಲು ಇದು ಉಪಕಾರಿಯಾಗಲಿದೆ ಎನ್ನಲಾಗಿದೆ. ವರ್ಷಾಂತ್ಯದೊಳಗೆ ಪಠ್ಯಕ್ರಮ ಮುಗಿಸುವ ಅಗತ್ಯತೆ ಇದ್ದು, ನಿರಂತರ ಮಳೆಯಿಂದಾಗಿ ತರಗತಿಗಳಿಗೆ ಅಡೆತಡೆ ಆಗುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ.

 

ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳ ಲಾಭದ ದೃಷ್ಟಿಯಿಂದ ಆನ್‌ಲೈನ್ ತರಗತಿಗಳ ಆಯ್ಕೆಯತ್ತ ಮುಖ ಮಾಡುತ್ತಿದ್ದಾರೆ. ಆದರೆ, ಈ ಕ್ರಮವನ್ನು ಎಲ್ಲ ಶಾಲೆಗಳು ಸಮರ್ಥಿಸುತ್ತಿಲ್ಲ. ಕೆಲ ಶಾಲೆಗಳು ಮಕ್ಕಳ ಮಾನಸಿಕ ಹಾಗೂ ಸಾಮಾಜಿಕ ಹಿತದೃಷ್ಟಿಯಿಂದ ಆನ್‌ಲೈನ್ ತರಗತಿಗಳಿಂದ ದೂರ ಉಳಿಯಲು ನಿರ್ಧರಿಸಿವೆ.

 

ಆದರೆ ಕೆಲ ಶಾಲೆಗಳು ಆನ್‌ಲೈನ್ ತರಗತಿಗಳನ್ನು ನಡೆಸಲು ಬೇಕಾದ ಎಲ್ಲ ಸೌಲಭ್ಯಗಳು ಅವರ ಬಳಿ ಇದ್ದರೂ, ಅದನ್ನು ನಡೆಸದಿರಲು ನಿರ್ಧರಿಸಿದ್ದಾರೆ. ಕಾರಣ, ಇದು ಮಕ್ಕಳಿಗೆ ಮೊಬೈಲ್ ಅಥವಾ ಇತರ ಗ್ಯಾಜೆಟ್‌ಗಳ ಬಳಕೆಗೆ ಒತ್ತು ನೀಡಬಹುದು. ಪೋಷಕರು ಕೆಲಸದಲ್ಲಿ ತೊಡಗಿರುವಾಗ ಮಕ್ಕಳು ಗ್ಯಾಜೆಟ್‌ ಬಳಕೆಯ ಮೇಲ್ವಿಚಾರಣೆಯಿಂದ ದೂರವಿರುತ್ತಾರೆ. ಇದರಿಂದ ಮಕ್ಕಳು ಇಂಟರ್ನೆಟ್ ಬೇರೆ ವಿಡಿಯೋ ಅಥವಾ ಇನ್ನಿತರ ಅನಗತ್ಯ ಕೆಲಸಗಳಿಗೆ ಉಪಯೋಗಿಸುವ ಸಾಧ್ಯತೆ ಇದೆ ಎನ್ನುತ್ತಾರೆ ಶಿಕ್ಷಕರು.

 

ಕೆಲವರು ವಾಟ್ಸಾಪ್ ಗುಂಪುಗಳ ಮೂಲಕ ಹೋಂವರ್ಕ್ ನೀಡುತ್ತಿದ್ದರೂ, ಅದನ್ನು ಪೂರ್ತಿಗೊಳಿಸಲು ನಿರ್ದಿಷ್ಟ ಸಮಯವನ್ನು ನೀಡುತ್ತಾರೆ. ಕೊರೊನಾ ಕಾಲದಲ್ಲಿ ನಡೆದ ಆನ್‌ಲೈನ್ ತರಗತಿಗಳ ಪರಿಣಾಮವಾಗಿ ಬಹುತೇಕ ಮಕ್ಕಳು ಗ್ಯಾಜೆಟ್ ಚಟಕ್ಕೆ ಆಸಕ್ತರಾಗಿದ್ದರಲ್ಲದೆ, ಕಲಿಕೆಯಲ್ಲಿ ಹಿಂದಕ್ಕೆ ಹೋಗಿದ್ದರು ಎಂಬ ವಿಷಯವನ್ನೂ ಇಲ್ಲಿ ಮರೆಯಲಾಗದು.