27 July 2025 | Join group

'ನನ್ನದೊಂದು ಬೇಡಿಕೆ – ಯಾವುದೇ ಸಣ್ಣ ಸಮಸ್ಯೆಯನ್ನೂ ನಿರ್ಲಕ್ಷಿಸಬೇಡಿ': ಇಹಲೋಕ ತ್ಯಜಿಸಿದ ರಾಜಶ್ರೀ ಜಯರಾಜ್ ಪೂಜಾರಿಯವರ ಅಂತಿಮ ಸಂದೇಶ ವೈರಲ್

  • 26 Jul 2025 01:07:44 PM

ಮಂಗಳೂರು: ವಕೀಲೆ, ಬಹುಮುಖ ಪ್ರತಿಭೆ, ಕವಯತ್ರಿ, ಯುವ ಸಾಹಿತಿ, ನಿರೂಪಕಿ, ಕಥಾವಾಚಕಿ, ಬರಹಗಾರ್ತಿ, ಲೇಖಕಿ, ಹಿನ್ನಲೆ ಧ್ವನಿ ಕಲಾವಿದೆ, ಪುಸ್ತಕ ಪ್ರೇಮಿ, ರಂಗಭೂಮಿ ಕಲಾವಿದೆ, ಹವ್ಯಾಸಿ ಪ್ರವಾಸಿ — ಹೀಗೆ ಬಣ್ಣಿಸಲು ಸಾಧ್ಯವಿಲ್ಲದಷ್ಟು ಪ್ರತಿಭೆಯ ಮಾಲೀಕೆ ರಾಜಶ್ರೀ ಜಯರಾಜ್ ಪೂಜಾರಿ ಜುಲೈ 25ರಂದು ಅಲ್ಪಕಾಲದ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.

 

ಇವರು ಬಹಳ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ತಮಗೆ ತೊಂದರೆ ನೀಡುತ್ತಿದ್ದ ಕಾಯಿಲೆ, ಮತ್ತು ಅದನ್ನು ಎದುರಿಸುತ್ತಿದ್ದ ಸಂದರ್ಭದ ಕುರಿತು, ಸಹಾಯ ಹಸ್ತ ಚಾಚಿದ ವ್ಯಕ್ತಿಗಳು ಹಾಗೂ ಸಮುದಾಯಕ್ಕೆ ಒಂದು ಮುನ್ಸೂಚನೆಯಂತ ಸಂದೇಶವನ್ನು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದರು.

 

“ನನ್ನದೊಂದು ಬೇಡಿಕೆ – ಯಾವುದೇ ಸಣ್ಣ ಸಮಸ್ಯೆ ಇದ್ದರೂ ಅದನ್ನು ನಿರ್ಲಕ್ಷಿಸಬೇಡಿ” ಎಂಬ ಆತ್ಮೀಯ, ಮತ್ತು ಮನಕಲಕುವ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹಲವರ ಮನಸ್ಸನ್ನು ತಟ್ಟಿದೆ.

ಈ ಸಂದೇಶವನ್ನು, ಅವರ ಜೀವನದ ಅಂತಿಮ ಆತ್ಮವಿದ್ಯೆಯಂತೆ ನೋಡಲಾಗುತ್ತಿದೆ.

 

" ಎಲ್ಲರಿಗೂ ನಮಸ್ಕಾರ

 

ನನ್ನದೊಂದು ದೊಡ್ಡ ಕತೆ. ಅದನ್ನು ಹೇಗೆ ಬರೆದು ತಿಳಿಸಲಿ ತಿಳಿಯುತ್ತಿಲ್ಲ. Infact ಪದಗಳಲ್ಲಿ ಬರೆದು ತಿಳಿಸಿ ಮುಗಿಸಲು ಸಾಧ್ಯವೂ ಇಲ್ಲ.

 

ಎರಡೂವರೆ ವರುಷಗಳಿಂದ ಸಣ್ಣದೊಂದು ರೀತಿಯಲ್ಲಿ ಶುರುವಾದ ಸಮಸ್ಯೆಯು ಎರಡು ಕಡೆಗಳಲ್ಲಿ - ಎರಡು ಬಾರಿ ವೈದ್ಯರ ತಪ್ಪಾದ ಚಿಕಿತ್ಸೆ ಮತ್ತು ಅವರು ಚಿಕಿತ್ಸೆಯಲ್ಲಿ ನೀಡಿದ heavy steroids ನಿಂದಾಗಿ ಈ ಪರಿಸ್ಥಿತಿ ಉಂಟಾಗಿದೆ. ನನ್ನ ಆರೋಗ್ಯ ಸಮಸ್ಯೆ ಬೇರೆಯದೇ. ಅದು ರಕ್ತ ಹೆಪ್ಪುಗಟ್ಟುವಿಕೆ ಮತ್ತು low platelets ನ ಸಮಸ್ಯೆಯಾಗಿದೆ (ಆರಂಭದಲ್ಲಿ). ಎರಡೂವರೆ ವರುಷದಿಂದ ಇಲ್ಲಿಯವರೆಗೂ ಸುಮಾರು 15 ಲಕ್ಷಕ್ಕೂ ಮೀರಿ ಈ ಸಮಸ್ಯೆಗೆ ಸಂಬಂಧಿಸಿ ಖರ್ಚಾಗಿದೆ. ಸಮಸ್ಯೆ ಗೊತ್ತಾಗುವವರೆಗೆ ನನ್ನಲ್ಲಿ ಯಾವುದೇ ರೀತಿಯ ಇನ್ಸೂರೆನ್ಸ್ ಇರದೇ ಇದ್ದಿದ್ದರಿಂದ ನನ್ನ ಅತ್ಯಂತ ಆಪ್ತರಾದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಳ ಕೋಶಾಧಿಕಾರಿ ಪದ್ಮರಾಜ್ ರಾಮಯ್ಯ ಸರ್ ತಾನು ಮತ್ತು ತನ್ನ ನೇತೃತ್ವದ ಗುರುಬೆಳದಿಂಗಳು ಸಂಸ್ಥೆಯ ಕೆಲವು ಸದಸ್ಯರುಗಳು ಮತ್ತು ಅವರ ಗೆಳೆಯರ ಬಳಗದಲ್ಲಿನ ದಾನಿಗಳಿಂದ ವೆಚ್ಚಗಳನ್ನು ನೋಡಿಕೊಳ್ಳುವುದರ ಮೂಲಕ ನನ್ನನ್ನು ಎಲ್ಲೂ ಸೋಲಲು ಬಿಡದೆ ಅಂದಿನಿಂದ ಇಂದಿನವರೆಗೂ ಭದ್ರ ಗೋಡೆಯಂತೆ ನನ್ನ ಜೊತೆಗೆ ನಿಂತಿದ್ದಾರೆ. ಅದರೊಂದಿಗೆ ನನ್ನ ಎಲ್ಲಾ ಉಳಿತಾಯ, ಸಂಪಾದನೆ, ಮನೆಯವರ ದುಡಿಮೆಯ ಭಾಗ, ಹಲವಾರು ಆಪ್ತರ ಸಹಾಯ ಮತ್ತು ಕೆಲವು ಸ್ನೇಹಿತರರಿಂದ ಸಾಲ ಮಾಡಿ ಹಣ ಹೊಂದಿಸಲು ನಾನೂ ಕಷ್ಟಪಟ್ಟಿದ್ದೇನೆ. ಒಟ್ಟಾಗಿ ಅಂದಿನಿಂದ ಇಲ್ಲಿಯವರೆಗೆ 13 ಸಲ ಆಸ್ಪತ್ರೆಗೆ ದಾಖಲಾಗಿದ್ದೇನೆ ಮತ್ತು ರಿಸ್ಕ್ ಇರುವ ಹೆಚ್ಚಿನ ಎಲ್ಲಾ ಟೆಸ್ಟ್ ಗಳನ್ನು ಮಾಡಿಸಿ ಒಂತರಾ ಕಲ್ಲಾಗಿ ನಿಂತಿದ್ದೇನೆ.

 

ಈಗ ಈ ಶಸ್ತ್ರಚಿಕಿತ್ಸೆಯ ನಂತರ 3 ತಿಂಗಳ ಕಾಲ ರೆಸ್ಟ್ ಹೇಳಿರುವುದರಿಂದ ಉಳಿದ ಟೆಸ್ಟ್ ಮತ್ತು ಚಿಕಿತ್ಸೆಯ ಖರ್ಚಿಗೆ ತುಂಬಾ ಹಣದ ಅವಶ್ಯಕತೆ ಇರುವುದರಿಂದ ನನ್ನ ಒಪ್ಪಿಗೆಯ ಮೇರೆಗೆ ಬೆಂಗಳೂರಿನಲ್ಲಿರುವ ನನ್ನ ಆಪ್ತರಾದ ಬರಹಗಾರ ವಿಜೇತ್ ಪೂಜಾರಿ ಶಿಬಾಜೆ, ಅಶೋಕ್ ಬಂಗೇರ ಓಟ್ಲ ಇವರುಗಳು ಸೇರಿಕೊಂಡು ನನ್ನ ಕಷ್ಟಕ್ಕೆ ಸಮಾಜದ ಮುಂದೆ ಇನ್ನಷ್ಟು ಸಹಾಯ ಕೇಳಲು ಮುಂದಾದರು. ಈ ಸಹಾಯಹಸ್ತದ ಪೋಸ್ಟರ್ ನೋಡಿ, ಸಹಾಯಕ್ಕೆ ಮುಂದಾಗಿ ತಮ್ಮಿಂದ ಸಾಧ್ಯವಾದ ಸಹಾಯವನ್ನು ಮಾಡಿದ, ಕರೆ ಮಾಡಿ ವಿಚಾರಿಸಿದ, ಧೈರ್ಯವನ್ನು ತುಂಬಿದ, ಕಾಳಜಿ ಪ್ರೀತಿಯಿಟ್ಟು ಆಸ್ಪತ್ರೆಗೆ ನನ್ನನ್ನು ನೋಡಲು ಬಂದ, ಆಸ್ಪತ್ರೆಯ ಖರ್ಚು ವೆಚ್ಚಗಳ ಬಗ್ಗೆ ವಿಚಾರಿಸಿ ತಮ್ಮಿಂದಾಗುವ ಸಹಾಯ ಮಾಡಲು ಮುಂದಾದ ಗಣ್ಯ ವ್ಯಕ್ತಿಗಳು, ಹೀಗೆ ಎಲ್ಲರಿಗೂ ನನ್ನ ಮನತುಂಬಿದ ಧನ್ಯವಾದ.

 

ನನಗೆ ತಪ್ಪಾದ ಚಿಕಿತ್ಸೆ ಮತ್ತು heavy steroids ನಿಂದ ಉಂಟಾದ ಈ AVN ಸಮಸ್ಯೆಯ ನೋವನ್ನು ಶಸ್ತ್ರಚಿಕಿತ್ಸೆಯ ಹೊರತಾಗಿ ಎಲ್ಲಾ ರೀತಿಯಲ್ಲಿಯೂ ಗುಣಪಡಿಸಲು ಪ್ರಯತ್ನಿಸಿದೆ. ಕೊನೆಗೆ ಶಸ್ತ್ರಚಿಕಿತ್ಸೆ ಮಾಡಿಸಲೇಬೇಕೆಂಬ ವೈದ್ಯರ ಸಲಹೆಯಂತೆ Bilateral joint hip core decompression ಶಸ್ತ್ರಚಿಕಿತ್ಸೆ ಶುಕ್ರವಾರ (11/07/2025) ದಂದು ಆಗಿದೆ. ಇನ್ನು ಸ್ವಲ್ಪ ಸಮಯ ಎಲ್ಲವೂ ಬೆಡ್‌ನಲ್ಲೇ. ಇನ್ನು 3 ತಿಂಗಳ ರೆಸ್ಟ್ ಹೇಳಿದ್ದಾರೆ. ಅದರಲ್ಲಿ ಒಂದು ತಿಂಗಳು ಸಂಪೂರ್ಣ ಬೆಡ್ ರೆಸ್ಟ್. ಹಲವಾರು ರೀತಿಯಲ್ಲಿ ಮೋಸ ಹೋಗಿ ನನಗೆ ಕೊನೆಗೂ ಒಂದು ವರ್ಷದ ಹಿಂದೆಯಷ್ಟೇ platelets ಗೆ ಸಂಬಂಧಿಸಿದ ಮಂಗಳೂರಿನ The Best ವೈದ್ಯರೊಬ್ಬರು ಸಿಕ್ಕಿದ್ರು. ತುಂಬಾ ಉತ್ತಮವಾದ ರೀತಿಯಲ್ಲಿ ನನ್ನ ಆರೋಗ್ಯ ಸಮಸ್ಯೆ ಸುಧಾರಿಸುತ್ತಾ ಬರುತ್ತಿದೆ. ನನಗಿರುವ platelets ನ ಆರೋಗ್ಯ ಸಮಸ್ಯೆಗೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ತುತ್ತಾಗುತ್ತಿದ್ದಾರೆ. ಆದರೆ ಅದರ ಅರಿವು ಯಾರಿಗೂ ಇಲ್ಲ. ಅದರ ಅರಿವು ಅತೀ ಅಗತ್ಯವಾಗಿ ಸಮಾಜಕ್ಕೆ ಬೇಕಾಗಿದೆ. ಹೀಗೆ ಈ ದೊಡ್ಡ ಕತೆ ಹೇಳಲು ತುಂಬಾ ಇದೆ. ಇನ್ನು ಸ್ವಲ್ಪ ಸಮಯದಲ್ಲಿ ವಿವರವಾಗಿ ನಿಮ್ಮೆಲ್ಲರ ಮುಂದೆ ಇದನ್ನು ತಿಳಿಸುತ್ತೇನೆ.

 

ನನ್ನದೊಂದು ಬೇಡಿಕೆ - ಯಾವುದೇ ಸಣ್ಣ ಸಮಸ್ಯೆ ಇದ್ದರೂ ಅದನ್ನು ನಿರ್ಲಕ್ಷಿಸಬೇಡಿ. ಸರಿಯಾದ ವೈದ್ಯರ ಬಳಿಯೇ ಚಿಕಿತ್ಸೆ ಪಡೆಯಿರಿ. ನನ್ನಂತೆ ಯಾರೂ ಮೋಸ ಹೋಗಬೇಡಿ.

 

ಅನಾರೋಗ್ಯ ನನ್ನನ್ನು ಕಾಡುವ ಮೊದಲೇ ಬದುಕಿನಲ್ಲಿ ಎಲ್ಲಾ ನೋವನ್ನು ನಾನು ಉಂಡಿದ್ದೇನೆ. ಅದರ ಜೊತೆಗೆ ಇದೂ ಒಂದು added ಅಷ್ಟೇ. ಆರ್ಥಿಕವಾಗಿ, ಮಾನಸಿಕವಾಗಿ ತುಂಬಾ ಕುಗ್ಗಿದ್ದೇನೆ. ಭಯ ಪಡುವಂತದೇನಿಲ್ಲ. ಹೇಳಲು ಸಾಧ್ಯವೇ ಇಲ್ಲದಷ್ಟು ನೋವಿದೆ. ಆದರೆ ಎಲ್ಲದಕ್ಕೂ ಕೊನೆಯಿದೆ. ನೋವಿಗೂ ಸಾವಿದೆ ಅನ್ನುವ ನಂಬಿಕೆ ನನ್ನದು. ಈ ಹಾದಿಯಲ್ಲಿ ಮಿಡಿದ ಮತ್ತು ಜೊತೆನಿಂತ ಎಲ್ಲಾ ಮನಗಳಿಗೂ ನಾ ಋಣಿ."

 

- Advocate Rajashree Jayaraj Poojary