27 July 2025 | Join group

ದ. ಕನ್ನಡದಲ್ಲಿ ಮರಳು ಬೇಕಾದರೆ 'ಡಿಕೆ ಸ್ಯಾಂಡ್ ಬಜಾರ್' ಆ್ಯಪ್ – ಗ್ರಾಮೀಣ ಬಡಜನರ ಪಾಲಿಗೆ ತಲೆನೋವಿನ ಮಾರ್ಗವೇ?!

  • 26 Jul 2025 01:54:40 PM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಮಗೆ ಮರಳು ಬೇಕಾದರೆ 'ಡಿಕೆ ಸ್ಯಾಂಡ್ ಬಜಾರ್' ಎನ್ನುವ ಡಿಜಿಟಲ್ ವೆಬ್‌ಸೈಟ್‌ ಮೂಲಕ ರಿಜಿಸ್ಟರ್ ಮಾಡಿ ಪಡೆಯಬೇಕಾಗಿದೆ. ದುರ್ದೈವವೆಂದರೆ ಈ ಆಪ್ ಇನ್ನೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಜನರು ಆನ್‌ಲೈನ್‌ ಮೂಲಕ ಅರ್ಜಿ ಹಾಕಿ ಆಮೇಲೆ ಮರಳನ್ನು ಖರೀದಿಸಬಹುದಾಗಿದೆ. ತಾತ್ವಿಕವಾಗಿ ಇದು ಸುಧಾರಿತ ಕ್ರಮವೆನಿಸಬಹುದು, ಆದರೆ ವಾಸ್ತವದಲ್ಲಿದು ಗ್ರಾಮೀಣ ಬಡಜನರ ಪಾಲಿಗೆ ಮತ್ತೊಂದು ಹೊರೆಯದಂತೆ ಕಾಣುತ್ತಿಲ್ಲವೇ?

 

ಈ ರೀತಿಯ ಡಿಜಿಟಲ್ ವ್ಯವಸ್ಥೆಗಳು ನಗರ ಪ್ರದೇಶದ ಶಿಕ್ಷಣ ಪಡೆದ, ಟೆಕ್ ಬಳಕೆಗೆ ಹೊಂದಿಕೊಳ್ಳುವ ಜನರಿಗಷ್ಟೆ ಸೀಮಿತವಾಗಿದ್ದು, ಹಳ್ಳಿಗಳ ಸಾಮಾನ್ಯರು ಇನ್ನಷ್ಟು ಹಿಂಜರಿಯಬೇಕಾದ ಪರಿಸ್ಥಿತಿ ಉಂಟುಮಾಡಿದೆ. ಗ್ರಾಮೀಣ ಪ್ರದೇಶದ ಕೆಲವು ಕಡೆ ಇಂಟರ್‌ನೆಟ್ ಸಿಗೋದು ಕಷ್ಟಕರ. ಒಂದೇ ಒಂದು OTP ಬರಬೇಕಾದರೂ ಗಂಟೆಗಳ ಕಾಲ ಕಾಯಬೇಕಾದ ಸ್ಥಿತಿ ಇಂದಿಗೂ ಬಹುಶಃ ನೂರಾರು ಹಳ್ಳಿಗಳಲ್ಲಿ ಇದೆ. ಹೆಚ್ಚಿನವರಿಗೆ ಸ್ಮಾರ್ಟ್‌ಫೋನ್ ಇಲ್ಲ, ಡಿಜಿಟಲ್ ವ್ಯವಹಾರ ಮಾಡಲು ತಾಂತ್ರಿಕ ಜ್ಞಾನವಿಲ್ಲ ಇಂತವರು ಅದೇಗೆ ಆಪ್ ಅಥವಾ ವೆಬ್ ಸೈಟ್ ಮೂಲಕ ಮರಳನ್ನು ಪಡೆಯುತ್ತಾರೆ?

 

ಅರ್ಧಕ್ಕೂ ಹೆಚ್ಚು ಜನರು ಮಧ್ಯವರ್ತಿಗಳ ಮೂಲಕ ಮರಳನ್ನು ಖರೀದಿಸಬೇಕಾಗುತ್ತದೆ, ವೆಬ್‌ಸೈಟ್ ಕಾರ್ಯನಿರ್ವಹಿಸದ ಕಾರಣ, OTP ಬಾರದ ಕಾರಣ, ಪಾವತಿ ಯಶಸ್ವಿಯಾಗಿ ಆಗದ ಕಾರಣ, ತೊಂದರೆಗಳನ್ನು ಭರಿಸುತ್ತಾ ಜನರು ಮತ್ತೆ ದಂಧೆಗಾರರ ಮುಂದೆ ಕೈ ಜೋಡಿಸಬೇಕಾಗಬಹುದು ಎನ್ನುತ್ತಾರೆ ಸಾರ್ವಜನಿಕರು.

 

ಬಡ, ಅಜ್ಞಾನ, ಶ್ರಮಿಕ ವರ್ಗದ ಜನರು ತಮ್ಮ ಮನೆಯ ಕಟ್ಟಡ ಕಾಮಗಾರಿಗೆ ಮರಳನ್ನು ಖರೀದಿಸಲು ಯಾವ ರೀತಿ ವೆಬ್‌ಸೈಟ್‌ಗಳ ಬಳಕೆ ಮಾಡುತ್ತಾರೆ ಎಂಬುವುದು ಊಹಿಸಲು ಅಸಾಧ್ಯ. ಅವರ ಸೇವೆಗೆ, ಹಕ್ಕಿಗೆ ಈ ಡಿಜಿಟಲ್ ತಂತ್ರಜ್ಞಾನ ಒಂದು ತಲೆನೋವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾಗದು.