ಮಂಗಳೂರು: ಧರ್ಮಸ್ಥಳ ಪರಿಸರದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಪತ್ರ ಬರೆದಿರುವ ಅನಾಮಧೇಯ ವ್ಯಕ್ತಿಯ ವಿಚಾರಣೆ ಎಸ್ಐಟಿ ತಂಡದಿಂದ ಭರದಿಂದ ಸಾಗುತ್ತಿದೆ.
ಜುಲೈ 26ರಂದು ಬೆಳಿಗ್ಗೆ ಇಬ್ಬರು ವಕೀಲರೊಂದಿಗೆ ಮಂಗಳೂರು ಮಲ್ಲಿಕಟ್ಟೆಯಲ್ಲಿರುವ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿರುವ ಎಸ್ಐಟಿಯ ತಾತ್ಕಾಲಿಕ ಕಚೇರಿಗೆ ಮುಸುಕುದಾರಿಯಾಗಿ ಆಗಮಿಸಿದ ವ್ಯಕ್ತಿ, ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆಯಲ್ಲಿ ಭಾಗಿಯಾಗಿದ್ದಾನೆ.
ಬೆಳಿಗ್ಗೆ 11:00 ಗಂಟೆಗೆ ಪ್ರಾರಂಭವಾದ ವಿಚಾರಣೆ ಸಂಜೆ 7:20ರವರೆಗೆ ನಡೆದಿದ್ದು, ಎಸ್ಐಟಿ ಅಧಿಕಾರಿ ಅನುಚೇತ್ ಮತ್ತು ಇತರ ಅಧಿಕಾರಿಗಳು ಸೇರಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ನಂತರ ಆ ವ್ಯಕ್ತಿಯನ್ನು ಅಜ್ಞಾತ ಸ್ಥಳಕ್ಕೆ ಕಳುಹಿಸಲಾಗಿದೆ. ಜುಲೈ 27ರ ಭಾನುವಾರ ಬೆಳಿಗ್ಗೆ ಸುಮಾರು 10:30ಕ್ಕೆ ಎಸ್ಐಟಿ ತಂಡದ ಮುಖ್ಯಸ್ಥ ಪ್ರಣವ್ ಮೋಹಂತಿ ಮಂಗಳೂರು ನಗರಕ್ಕೆ ಆಗಮಿಸಿ ನೇರವಾಗಿ ಮಲ್ಲಿಕಟ್ಟೆಯ ತಾತ್ಕಾಲಿಕ ಕಚೇರಿಗೆ ತೆರಳಿದ್ದಾರೆ.
ಎಸ್ಐಟಿ ನೀಡಿದ್ದ ಸೂಚನೆಯಂತೆ ಇಂದು (ಜು.27) ಬೆಳಿಗ್ಗೆ 11 ಗಂಟೆಗೆ ಅನಾಮಿಕ ದೂರದಾರರು ಮೂವರು ವಕೀಲರೊಂದಿಗೆ ಮತ್ತೆ ಕಚೇರಿಗೆ ಹಾಜರಾಗಿ, ಮುಖವಾಡ ಧರಿಸಿ ವಿಚಾರಣೆಗೆ ಭಾಗಿಯಾಗಿದ್ದಾರೆ.
ಮಹತ್ತರ ಮಾಹಿತಿಗಳನ್ನು ಸಂಗ್ರಹಿಸಲು ಎಸ್ಐಟಿ ತಂಡ ಪರಿಶ್ರಮ ಪಡುತ್ತಿದ್ದು, ಮೂಲಗಳ ಪ್ರಕಾರ, ನೂರಾರು ಶವಗಳನ್ನು ಹೂತಿರುವ ಬಗ್ಗೆ ಪಶ್ಚಾತಾಪ ವ್ಯಕ್ತಪಡಿಸಿರುವ ವ್ಯಕ್ತಿ ಹಲವು ಸ್ಪೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ.
ತನಿಖೆಯ ಸಂಪೂರ್ಣ ವಿವರ ಬಹಿರಂಗವಾದ ನಂತರವೇ ಸತ್ಯಾಂಶಗಳು ಪ್ರಕಟಗೊಳ್ಳಲಿದ್ದು, ಈ ಪ್ರಕರಣ ಇದೀಗ ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಎಲ್ಲರ ಕಣ್ಣುಗಳು ಈಗ ಎಸ್ಐಟಿ ಮೇಲೆ ನೆಟ್ಟಿವೆ.