27 July 2025 | Join group

ಭಾರೀ ಮಳೆಗೆ ಬಿದ್ದ ಮನೆ ಗೋಡೆಗೆ ಪರಿಹಾರ ಸಿಗದೇ ಕುಟುಂಬ ಕಂಗಾಲು: ಜೋಪಡಿಯಲ್ಲಿ ಬದುಕು!

  • 27 Jul 2025 07:14:48 PM

ಬಂಟ್ವಾಳ: ಕಳೆದ ಋತುವಿನಲ್ಲಿ ಸುರಿದ ಭಾರೀ ಮಳೆಗೆ ಬಿದ್ದ ಮನೆಗೆ ಪರಿಹಾರ ಇನ್ನೂ ಬರದೇ ಇರುವ ಘಟನೆ ಈಗ ಬೆಳಕಿಗೆ ಬಂದಿದೆ. ಸಂಬಂಧಪಟ್ಟವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡರು ಇಲ್ಲಿಯವರೆಗೆ ಪರಿಹಾರ ದೊರೆಯದೆ ಇರುವ ಬಗ್ಗೆ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.

 

ಭಾರೀ ಗಾಳಿ ಮಳೆಗೆ ಬಂಟ್ವಾಳದ ಪುಣಚ ಗ್ರಾಮದ ದೇವಿನಗರ ನಿವಾಸಿ ದಲಿತ ಕುಟುಂಬಕ್ಕೆ ಸೇರಿದ ಚೋಮ ನಲಿಕೆ ಕುಟುಂಬದ ಮಣ್ಣಿನ ಗೋಡೆಯ ಮನೆ ಸಂಪೂರ್ಣ ಧರೆಗುರುಳಿತ್ತು. ಆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಗ್ರಾಮಪಂಚಾಯತ್ ಜನಪ್ರತಿನಿಧಿಗಳು, ಅಧಿಕಾರಿಗಳು, ತಹಶೀಲ್ದಾರ್ ಎಲ್ಲರೂ ಪರಿಶೀಲನೆ ನಡೆಸಿದ್ದರು.

 

ಎಲ್ಲರೂ ತಕ್ಷಣವೇ ಮನೆಗೆ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದರಾದರೂ, ಮನೆ ಬಿದ್ದು ಒಂದು ವರ್ಷ ಕಳೆದರೂ ಯಾವುದೇ ಪರಿಹಾರ ನಮಗೆ ಸಿಗಲಿಲ್ಲ ಎಂದು ಕುಟುಂಬಸ್ಥರು ಅಳಲನ್ನು ತೋಡಿಕೊಂಡಿದ್ದಾರೆ.

 

ಹಲವು ಬಾರಿ ಕ್ಷೇತ್ರದ ಶಾಸಕರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನ ಆಗಲಿಲ್ಲ ಎಂಬ ಬೇಸರವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಇದೀಗ ಕುಟುಂಬ ಜೋಪಡಿಯಲ್ಲಿ ಬದುಕುವ ಪರಿಸ್ಥಿತಿ ಬಂದೊದಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಮೂಲಕ ತಕ್ಷಣ ಎಚ್ಚೆತ್ತುಕೊಂಡು ಪರಿಹಾರ ದೊರೆಕಿಸಿಕೊಡಬೇಕಾಗಿ ವಿನಂತಿಸಲಾಗಿದೆ.