ಧರ್ಮಸ್ಥಳದ ಪರಿಸರದಲ್ಲಿ ನೂರಾರು ಹೆಣಗಳನ್ನು ಹೂತಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ ವ್ಯಕ್ತಿಯನ್ನು ಮಂಗಳೂರಿನ ಎಸ್ಐಟಿ ಕಚೇರಿಯಲ್ಲಿ ವಿಚಾರಣೆ ನಡೆಸಿದ ನಂತರ, ಇದೀಗ ಎಸ್ಐಟಿ ತಂಡ ಧರ್ಮಸ್ಥಳ ಪರಿಸರಕ್ಕೆ ಕರೆದುಕೊಂಡು ಬಂದಿದೆ.
ಅದೇ ಮುಸುಕುಧಾರಿ ಗೆಟಪ್ ನಲ್ಲಿ ಬಂದ ಆ ವ್ಯಕ್ತಿ ಧರ್ಮಸ್ಥಳದ ಹತ್ತಿರದ ನೇತ್ರಾವತಿ ನದಿಯ ಸ್ನಾನಘಟ್ಟಕ್ಕೆ ಬಂದಿಳಿದ ಕ್ಷಣ ಬಹಳ ರೋಮಾಂಚನಕಾರಿಯಾಗಿತ್ತು. ಯಾಕೆಂದರೆ, ಶಸ್ತ್ರಸಜ್ಜಿತ ಪೊಲೀಸ್ ಪಡೆಯ ಬೆಂಗಾವಲಿನಲ್ಲಿ ಆ ವ್ಯಕ್ತಿಯ ಜೊತೆ ಎಸ್ಐಟಿ ಅಧಿಕಾರಿಗಳು, ಎಸಿ, ತಹಶೀಲ್ದಾರ್ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ(FSL) ತಂಡ ಜೊತೆಗಿದ್ದವು.
ಬೆಳಿಗ್ಗೆ 10:15ಕ್ಕೆ ಬೆಳ್ತಂಗಡಿ ಪೊಲೀಸ್ ಠಾಣಾ ಹತ್ತಿರದ ಎಸ್ಐಟಿ ಆಫೀಸ್ ಗೆ ಮೊದಲು ಕರೆದುಕೊಂಡು ಹೋಗಲಾಯಿತು. ನಂತರ, ಅನಾಮಧೇಯ ವ್ಯಕ್ತಿ ತಿಳಿಸಿದಂತೆ ನೇತ್ರಾವತಿ ನದಿ ಪಕ್ಕದಲ್ಲಿ ಕಟ್ಟಲಾದ ಸಣ್ಣ ಆಣೆಕಟ್ಟಿನ ಹತ್ತಿರದ ರಸ್ತೆಯಲ್ಲಿ ಕ್ರಾಸ್ ಮಾಡಿ, ಗುಡ್ಡ ಪ್ರದೇಶಕ್ಕೆ ಕರೆದುಕೊಂಡು ಹೋಗಲಾಯಿತು.
ಗುಡ್ಡಗಾಡಿನ ಒಳಗೆ ಸರಿಸುಮಾರು ಒಂದೂವರೆ ಕಿ.ಮೀ ನಷ್ಟು ಒಳಗಡೆ ಹೋಗಿ ಬೇರೆ ಬೇರೆ ಹೆಣ ಹೂತುಹಾಕಿದ ಸ್ಥಳಗಳನ್ನು ಆ ವ್ಯಕ್ತಿ ತೋರಿಸಿದ್ದಾನೆ. ಅಚ್ಚರಿಯ ಸಂಗತಿಯೆಂದರೆ, ಅವನು ಅಷ್ಟು ನಿಖರವಾಗಿ ಆ ಪ್ರದೇಶಗಳನ್ನು ತೋರಿಸಿದ ರೀತಿ ನೋಡಿ ಒಮ್ಮೆ ಅಧಿಕಾರಿಗಳು ಆಶ್ಚರ್ಯಚಕಿತರಾಗಿದ್ದರೆ.
ಆತ 2014ರ ನಂತರ, ಸುಮಾರು 11 ವರ್ಷಗಳ ಕಾಲ ಆತ ಧರ್ಮಸ್ಥಳಕ್ಕೆ ಕಾಲಿಟ್ಟಿಲ್ಲ. ಧರ್ಮಸ್ಥಳದ ಪರಿಸರದಿಂದ ಹೊರಗಡೆನೇ ಇದ್ದ ಎನ್ನಲಾಗಿದೆ. 1998 ರಿಂದ 2014ರ ವರೆಗೆ ಹೂತು ಹಾಕಿದ ಆ ಸ್ಥಳಗಳು ಇನ್ನೂ ನೆನಪು ಇರುವುದು ತುಂಬಾ ಕುತೂಹಲಕಾರಿಯಾದ ಸಂಗತಿಯಾಗಿದೆ.
ಆತ ತೋರಿಸಿದ ಹೆಚ್ಚಿನ ಪ್ರದೇಶಗಳು ದೊಡ್ಡ ಮರದ ಹತ್ತಿರ ಇರುವುದರಿಂದ ಹೂತು ಹಾಕಿದ ಸ್ಥಳಗಳನ್ನು ನೆನಪಿಡಲು ಆತನಿಗೆ ಸಹಕಾರಿಯಾಗಿರಬಹುದು ಎನ್ನಲಾಗಿದೆ. ಒಟ್ಟಾರೆಯಾಗಿ, ಜುಲೈ 28 ರಂದು ಒಟ್ಟು 13 ಸ್ಥಳಗಳ ಮಹಜರು ಮಾಡಲಾಗಿದೆ.
ಇದರಲ್ಲಿ ಎಲ್ಲಾ ಜಾಗಗಳು ಕಂದಾಯ ಮತ್ತು ಅರಣ್ಯ ಇಲಾಖೆಗೆ ಸೇರಿದ್ದವು ಮತ್ತು ಮಹಜರು ಸಂದರ್ಭದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಕೂಡಾ ಗಡಿ ಗುರುತು ಮಾಡಿದ್ದಾರೆ. 14ನೇ ಸ್ಥಳ ಗುರುತು ಮಾಡುವ ಸಂದರ್ಭದಲ್ಲಿ ಕತ್ತಲು ಆದ ಕಾರಣ ಅದನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಯಿತು.
ಮೂಲಗಳ ಪ್ರಕಾರ, 14ನೇ ಗುರುತು ಮಾಡಲಿರುವ ಪ್ರದೇಶ ಖಾಸಗಿಯವರಿಗೆ ಸೇರಿದ್ದು ಎನ್ನಲಾಗಿದೆ. ವಿಶೇಷವೆಂದರೆ, ಆತ ತೋರಿಸಿದ 8 ಮತ್ತು 13 ಗುರುತು ಮಾಡಿದ ಸ್ಥಳಗಳು ರಾಜಮಾರ್ಗದ ಪಕ್ಕಕ್ಕೆ ಇದ್ದು, ಹೊರಗಡೆ ಕಾಣುತ್ತಿರುವುದರಿಂದ ಸಾರ್ವಜನಿಕರು ವೀಕ್ಷಿಸುವಂತಾಗಿದೆ.
ಗುರುತು ಮಾಡಿದ ಒಟ್ಟು ಎಲ್ಲಾ ಸ್ಥಳಗಳಲ್ಲಿ 13ನೇ ಸ್ಥಳ ಬಹಳ ದೊಡ್ಡದಾಗಿದ್ದು, ಆ ಪ್ರದೇಶದಲ್ಲಿ ಒಂದಕ್ಕಿಂತ ಹೆಚ್ಚು ಹೆಣಗಳನ್ನು ಹೂತಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ. ಮಾರ್ಕ್ ಮಾಡಿದ ಎಲ್ಲಾ ಸ್ಥಳಗಳಲ್ಲಿ 24 ಗಂಟೆ ಶಸ್ತ್ರಸಜ್ಜಿತ ಗನ್ ಮ್ಯಾನ್ ಗಳನ್ನೂ ನೇಮಕಮಾಡಲಾಗಿದೆ. ಮಳೆ ಅತಿಯಾಗಿರುವ ಈ ಸಂದರ್ಭದಲ್ಲೂ ಯಾವುದೇ ಕಾರಣಕ್ಕೂ ಭದ್ರತೆಯಲ್ಲಿ ಲೋಪವಾಗಬಾರದೆಂದು ಉನ್ನತ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ನಕ್ಸಲ್ ವಿರೋಧಿ ಪಡೆಯ ಸಿಬ್ಬಂದಿಗಳನ್ನು ಕೂಡ ಈ ಪ್ರದೇಶದಲ್ಲಿ ಹಾಕಲಾಗಿದೆ. ಡ್ರೋನ್ ಮೂಲಕ ಈಗಾಗಲೇ ಎಲ್ಲಾ ಪ್ರದೇಶಗಳ ವಿಡಿಯೋ ರೆಕಾರ್ಡಿಂಗ್ ಕೂಡ ಮಾಡಲಾಗಿದ್ದು, ಯಾವುದೇ ರೀತಿಯಲ್ಲಿ ಸಾಕ್ಷ್ಯಗಳನ್ನು ನಾಶಪಡಿಸುವುದಕ್ಕೆ ಅವಕಾಶ ಕೊಡಲಾಗುವುದಿಲ್ಲ. ನಂತರದ ಪ್ರಕ್ರಿಯೆಗಳು ಮುಂದುವರಿಯಲಿದೆ.