31 July 2025 | Join group

ಧರ್ಮಸ್ಥಳದಲ್ಲಿ ಹೆಣ ಹೂತಿದ್ದಾರೆ ಎಂಬ ಮಾಹಿತಿ ಹಿನ್ನೆಲೆ: ಐದು ಸ್ಥಳಗಳಲ್ಲಿ ಅಗೆತ, ಯಾವುದೇ ಕುರುಹು ಸಿಕ್ಕಿಲ್ಲ – ಮುಂದಿನ ಹಂತ ನಿರೀಕ್ಷೆ

  • 30 Jul 2025 05:46:05 PM

ಧರ್ಮಸ್ಥಳ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಹೆಣಗಳನ್ನು ಹೂತುಹಾಕಲಾಗಿದೆ ಎಂಬ ಅನಾಮಧೇಯ ವ್ಯಕ್ತಿಯ ಹೇಳಿಕೆಯನ್ನು ಆಧರಿಸಿ, ಜುಲೈ 28, ಸೋಮವಾರದಂದು ಅಧಿಕಾರಿಗಳ ಸಮ್ಮುಖದಲ್ಲಿ ಒಟ್ಟು 13 ಸ್ಥಳಗಳನ್ನು ಗುರುತಿಸಲಾಗಿತ್ತು.

 

ನಿನ್ನೆ (ಮಂಗಳವಾರ) ಮೊದಲ ಗುರುತಿನ ಸಮಾಧಿ ಪಾಯಿಂಟ್‌ನಲ್ಲಿ ಸುಮಾರು 6ರಿಂದ 8 ಅಡಿಗಳಷ್ಟು ಆಳಕ್ಕೆ ಅಗೆತ ಕಾರ್ಯ ನಡೆಯಿತು. ಆದಾಗ್ಯೂ, ಯಾವುದೇ ಮಾನವ ಅವಶೇಷಗಳು ಅಥವಾ ಸಂಬಂಧಿತ ಕುರುಹುಗಳು ದೊರೆತಿಲ್ಲ.

 

ಇಂದು (ಬುಧವಾರ) ಬೆಳಿಗ್ಗೆಯಿಂದ ಕಾರ್ಯಾಚರಣೆ ಮುಂದುವರಿಯಿತು. ಸಮಾಧಿ ಪಾಯಿಂಟ್ 2ರಿಂದ ಆರಂಭಿಸಿ, 3, 4ನೇ ಮತ್ತು 5 ಪಾಯಿಂಟ್ ಗಳವರೆಗೆ ಅಗೆತ ನಡೆಯಿತು. 1ರಿಂದ 5 ಪಾಯಿಂಟ್‌ವರೆಗೆ ಯಾವುದೇ ಸೂಚನೆಗಳು ಸಿಕ್ಕಿಲ್ಲ.

 

ಮಳೆಯ ನಡುವೆಯೂ ಕಾರ್ಯಾಚರಣೆ ಭರದಿಂದ ನಡೆದಿದ್ದು, ಮಂಗಳವಾರ ಪೌರಕಾರ್ಮಿಕರು ಕೈ ಆಡಿಸಿದ್ದಾಗ ನೀರಿನ ಪ್ರವಾಹ ಹೆಚ್ಚಾದ ಕಾರಣ ಜೆಸಿಬಿ ಸಹಾಯದಿಂದ ಕಾರ್ಯ ಮುಂದುವರಿಸಲಾಗಿತ್ತು. ಆದರೆ ಇಂದು, ಜೆಸಿಬಿ ಬಳಸದೆ, 2ರಿಂದ 5ನೇ ಸ್ಥಳಗಳನ್ನು ಪೌರಕಾರ್ಮಿಕರೇ ಅಗೆದರು.

 

ಇನ್ನೂ ಯಾವುದೇ ಕಳೇಬರಹಗಳು ಸಿಕ್ಕಿಲ್ಲದ ಕಾರಣ, ಇಂದಿನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಉಳಿದ ಸ್ಥಳಗಳಲ್ಲಿ ನಾಳೆ ಮತ್ತೆ ಅಗೆತ ಕಾರ್ಯ ನಡೆಯುತ್ತದೆಯೇ ಎಂಬುದು ಕಾದು ನೋಡಬೇಕಿದೆ.