ಬಂಟ್ವಾಳ, ಕಡೇಶಿವಾಲಯ: ಕಳೆದ 3 ದಿನಗಳಿಂದ ನಾಪತ್ತೆಯಾಗಿರುವ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ನಿವಾಸಿ ಹೇಮಂತ್ ಆಚಾರಿ ಇನ್ನೂ ಪತ್ತೆಯಾಗದ ಕಾರಣ ಜಕ್ರಿಬೆಟ್ಟು ಪರಿಸರದ ನೇತ್ರಾವತಿ ನದಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕಡೇಶಿವಾಲಯದ ಕೊರತಿಗುರಿಯಾ ನಿವಾಸಿ ಹೇಮಂತ್ ವೃತ್ತಿಯಲ್ಲಿ ನೀರಿನ ಫಿಲ್ಟರ್ ರಿಪೇರ್ ಮಾಡುತ್ತಿದ್ದು, ಕೆಲಸಕ್ಕೆಂದು ಪರಂಗಿಫೇಟೆಗೆ ತೆರಳಿದ್ದ ಯುವಕ ಮನೆಗೆ ಮರಳಿ ಬರದೇ ನಾಪತ್ತೆಯಾಗಿದ್ದರು.
ಈ ಪ್ರಕರಣ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದಾಖಲಾದಂತೆ, ಪೊಲೀಸರು ತನಿಖೆ ನಡೆಸಿ ಯುವಕನ ಬೈಕ್ ಬಂಟ್ವಾಳದ ಬಡ್ಡಕಟ್ಟೆಯ ಜಕ್ರಿಬೆಟ್ಟು ಹತ್ತಿರದ ನೇತ್ರಾವತಿ ನದಿಗೆ ಕಟ್ಟಲಾದ ಡ್ಯಾಮ್ ಬಳಿ ನಿಂತಿದ್ದ ಬೈಕ್ ನ್ನು ಪತ್ತೆ ಹಚ್ಚಿದ್ದರು.
ನೇತ್ರಾವತಿ ನದಿಗೆ ಹಾರಿರಬಹುದು ಎನ್ನುವ ಸಂಶಯದ ಮೇರೆಗೆ ಪೊಲೀಸ್ ತಂಡ ಮತ್ತು ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಯಾವುದೇ ಸುಳಿವು ಸಿಕ್ಕದೆ ಇರುವ ಕಾರಣ ಇದೀಗ ಹೆಸರಾಂತ ಈಜು ತಜ್ಞ ಈಶ್ವರ್ ಮಲ್ಪೆ ಮತ್ತು ತಂಡವನ್ನು ಕರೆ ತರಿಸಿ ಪತ್ತೆ ಹಚ್ಚುವ ಕಾರ್ಯಾಚರಣೆಗೆ ಇಳಿದಿದ್ದಾರೆ ಎಂದು ತಿಳಿದುಬಂದಿದೆ.