01 August 2025 | Join group

ವಿಐಪಿ ಕಾರುಗಳ ಸೈರನ್ ಗೆ ಬ್ರೇಕ್: ಅನಾವಶ್ಯಕ ಸೈರನ್ ಹಾಕಿಕೊಂಡು ಹೋಗುವಂತಿಲ್ಲ

  • 31 Jul 2025 12:41:46 PM

ಬೆಂಗಳೂರು: ಒಂದು ಕಾಲದಲ್ಲಿ ಯಾವುದೇ ರಾಜಕೀಯ ಪಕ್ಷದ ಸಣ್ಣ ನಾಯಕರಿಂದ ಹಿಡಿದು ಇಲಾಖಾ ಮುಖ್ಯಸ್ಥರವರೆಗೆ ಎಲ್ಲರೂ ತಮ್ಮ ಕಾರುಗಳ ಮೇಲೆ ಸೈರನ್ ಇಡುತ್ತಿದ್ದರು. ರಸ್ತೆಗಳಲ್ಲಿ ಅವರ ಚಲನೆಯ ಸಮಯದಲ್ಲಿ ಭಾರಿ ಶಬ್ದ ಮಾಲಿನ್ಯ ಮತ್ತು ಸಂಚಾರದ ದುರುಪಯೋಗವೂ ಆಗುತ್ತಿತ್ತು.

 

ಆದರೆ ಇತ್ತೀಚಿನ ದಿನಗಳಲ್ಲಿ ನಾವು ಹೈ ಲೆವೆಲ್ ವಿಐಪಿ ಜನರು ಮಾತ್ರ ಸೈರನ್ ಬಳಸುವುದನ್ನು ನೋಡಬಹುದು ಆದರೆ ಮಧ್ಯಮ ಅಥವಾ ಕೆಳ ವರ್ಗದ ನಾಯಕರು ಅಥವಾ ಇಲಾಖೆಯ ಮುಖ್ಯಸ್ಥರು ಸೈರನ್ ಬಳಸುತ್ತಿಲ್ಲ.. ಈ ಬದಲಾವಣೆಗಳನ್ನು ನಾವು ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲಿ ಕಾಣಬಹುದಾಗಿದೆ.

 

ಆದಾಗ್ಯೂ, ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಮ್ ಅವರು ಯಾವುದೇ ವಿಐಪಿ ವಾಹನಗಳಿಗೆ ಸೈರನ್‌ಗಳನ್ನು ನಿಷೇಧಿಸಿದ್ದಾರೆ. ಈ ಕ್ರಮವನ್ನು ಸಾರ್ವಜನಿಕರು ಬಹುವಾಗಿ ಮೆಚ್ಚಿದ್ದಾರೆ. ನಾವು ನೆನಪಿಸಿಕೊಂಡರೆ 2017 ರಲ್ಲಿ ಕೇಂದ್ರ ಸರಕಾರ ಕೂಡ ಎಲ್ಲಾ ವಿಐಪಿ ವಾಹನಗಳಿಗೆ ಸೈರನ್(ಲಾಲ್ ಬತ್ತಿ) ರಾಷ್ಟ್ರಪತಿ, ಪ್ರಧಾನಿ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳ ವಾಹನಗಳಿಗೆ ಸೇರಿದಂತೆ ಯಾವುದೇ ವಾಹನಕ್ಕೂ ಅಳವಡಿಸದಂತೆ ನಿರ್ದೇಶನ ಜಾರಿಗೊಳಿಸಿತ್ತು.

 

ಗಣ್ಯರ ಸಂಚಾರದ ಸಮಯದಲ್ಲಿ ಸೈರನ್‌ಗಳ ದುರುಪಯೋಗದ ಬಗ್ಗೆ ಸಾರ್ವಜನಿಕರ ಕಳವಳ ವ್ಯಕ್ತವಾಗಿತ್ತು. ಇಂತಹ ಬಳಕೆಯು ಸಂಚಾರ ಅಡಚಣೆ ಮತ್ತು ಸಾರ್ವಜನಿಕರ ಅನಾನುಕೂಲತೆಯನ್ನು ಉಂಟುಮಾಡುತ್ತದೆ. ಇದು ಮಾತ್ರವಲ್ಲದೆ ಅನಧಿಕೃತ ವ್ಯಕ್ತಿಗಳಿಗೆ ವಿಐಪಿ ವ್ಯಕ್ತಿಗಳ ಮಾರ್ಗವನ್ನು ಬಹಿರಂಗಪಡಿಸುವ ಮೂಲಕ ವಿಐಪಿ ಭದ್ರತೆಗೆ ಧಕ್ಕೆ ಕೂಡ ಬರುತ್ತದೆ ಎಂದು ಎಲ್ಲಾ ಘಟಕದ ಮುಖ್ಯಸ್ಥರಿಗೆ ಇನ್ನು ಮುಂದೆ ಸೈರನ್ ಬಳಸದಂತೆ ನಿರ್ದೇಶನ ಜಾರಿಗೊಳಿಸಲಾಗಿದೆ.

 

ಆಂಬುಲೆನ್ಸ್, ಅಗ್ನಿಶಾಮಕ ದಳಗಳು, ಪೊಲೀಸ್ ಗಸ್ತು ಘಟಕದ ವಾಹನಗಳು ಮತ್ತು ಇನ್ನಿತರ ತುರ್ತು ವಾಹನಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಾಹನಗಳಿಗೆ ಸೈರನ್ ಬಳಸಲು ಅವಕಾಶವಿಲ್ಲ ಮತ್ತು ನಿಜವಾದ ತುರ್ತು ಸಂದರ್ಭದಲ್ಲಿ ಮಾತ್ರ ಬಳಸಬೇಕೆಂದು ಡಿಜಿಪಿ ಒತ್ತಿ ಹೇಳಿದ್ದಾರೆ.

 

ಒಂದು ವೇಳೆ ಸಾರ್ವಜನಿಕರು ಯಾವುದೇ ವಿಐಪಿ ವಾಹನಗಳು ಸೈರನ್ ಬಳಸಿಕೊಂಡು ರಸ್ತೆಯಲ್ಲಿ ಓಡಾಡುವುದನ್ನು ಕಂಡರೆ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ಕೊಡಬಹುದು.