02 August 2025 | Join group

ನೇತ್ರಾವತಿ ಘಟ್ಟದ ಉತ್ಖನನದಲ್ಲಿ ಪಾನ್ ಕಾರ್ಡ್ ಪತ್ತೆ: ನೆಲಮಂಗಲ ನಿವಾಸಿಯ ಡಾಕ್ಯುಮೆಂಟ್ ಧರ್ಮಸ್ಥಳದಲ್ಲಿ ಹೇಗೆ ಬಿದ್ದಿತು ಎಂಬುದು ಎಸ್ಐಟಿಗೆ ಸವಾಲು!

  • 01 Aug 2025 12:33:27 PM

ಅನಾಮಧೇಯ ವ್ಯಕ್ತಿಯ ದೂರು ಆಧರಿಸಿ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತ ಎಸ್‌ಐಟಿ ಅಧಿಕಾರಿಗಳ ತಂಡ ಉತ್ವಖನ ಕಾರ್ಯವನ್ನು ಕಳೆದ ಸೋಮವಾರದಿಂದ ಆರಂಭಿಸಿದೆ. ಗುರುತಿಸಲಾದ ಒಟ್ಟು 13 ಸ್ಥಳಗಳಲ್ಲಿ ಈಗಾಗಲೇ 1 ರಿಂದ 6ನೇ ಪಾಯಿಂಟ್‌ಗಳವರೆಗೆ ಅಗೆಯುವ ಪ್ರಕ್ರಿಯೆ ಪೂರ್ಣಗೊಂಡಿದೆ.

 

1ರಿಂದ 5ನೇ ಪಾಯಿಂಟ್‌ಗಳವರೆಗೆ ಯಾವುದೇ ಮಾನವ ಕಳೇಬರ ಅವಶೇಷಗಳು ಪತ್ತೆಯಾಗಿಲ್ಲ. ಆದರೆ 6ನೇ ಪಾಯಿಂಟ್‌ನಲ್ಲಿ ಜುಲೈ 31 ರಂದು ತಲೆ ಬುರುಡೆ ಮತ್ತು ಇತರ ಎಲುಬುಗಳು ಪತ್ತೆಯಾಗಿವೆ.

 

ಮಹತ್ವದ ಸಂಗತಿಯೆಂದರೆ, 1ನೇ ಪಾಯಿಂಟ್‌ನಲ್ಲಿ ಉತ್ಖನನ ನಡೆಸುವ ಸಂದರ್ಭ, ಅಲ್ಲಿ ಒಬ್ಬ ಪುರುಷನ ಪಾನ್ ಕಾರ್ಡ್ ಹಾಗೂ ಮಹಿಳೆಯೊಬ್ಬರ ಎಟಿಎಂ ಕಾರ್ಡ್ ಪತ್ತೆಯಾಗಿದೆ. ಪಾನ್ ಕಾರ್ಡ್‌ನಲ್ಲಿ ನೀಡಿರುವ ವಿವರಗಳ ಆಧಾರದ ಮೇಲೆ ಎಸ್‌ಐಟಿ ತಂಡ ಆ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಿದೆ. ಅವರು ಕಳೆದ ವರ್ಷ 2024ರ ಡಿಸೆಂಬರ್ ತಿಂಗಳಲ್ಲಿ ಜಾಂಡಿಸ್‌ ರೋಗದಿಂದ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬದವರು ದೃಢಪಡಿಸಿದ್ದಾರೆ.

 

ಎಟಿಎಂ ಕಾರ್ಡ್ ಪತ್ತೆಯಾದ ಮಹಿಳೆಯ ಬಗ್ಗೆ ತನಿಖೆ ನಡೆಸಿದಾಗ, ಅವರು ಈಗಲೂ ಜೀವಿತವಾಗಿದ್ದು, ಅದೇ ವಿಳಾಸದಲ್ಲಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 

ಇದೀಗ ಎಲ್ಲರ ಗಮನ ಸೆಳೆಯುತ್ತಿರುವ ವಿಚಾರವೆಂದರೆ — ಪಾನ್ ಕಾರ್ಡ್ ಹೊಂದಿದ ವ್ಯಕ್ತಿಯ ಹೆಸರು ಸುರೇಶ್ ಎಂದಾಗಿದ್ದು ಅವರು ಬೆಂಗಳೂರು ಸಮೀಪದ ನೆಲಮಂಗಲದ ನಿವಾಸಿಯಾಗಿದ್ದು, ಅವರ ಮರಣ ಮಂಡ್ಯದ ಆಸ್ಪತ್ರೆಯಲ್ಲಿ ಸಂಭವಿಸಿದೆ. ಇಂತಹ ಸಂದರ್ಭದಲ್ಲಿ ಅವರ ಪಾನ್ ಕಾರ್ಡ್ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ಹೇಗೆ ಪತ್ತೆಯಾಯಿತು ಎಂಬ ಪ್ರಶ್ನೆ ಎಸ್ಐಟಿ ತಂಡದ ಮುಂದೆ ನಿಂತಿದೆ. ಈ ಸಂಗತಿ ಸಾರ್ವಜನಿಕರಲ್ಲಿಯೂ ಬೃಹತ್ ಕುತೂಹಲವನ್ನು ಮೂಡಿಸಿದೆ.