ಪುತ್ತೂರು: ಆಟಿಕೂಟದ ಕಾರ್ಯಕ್ರಮದಲ್ಲಿ ಹಿಂದೂಗಳ ಆರಾಧಕ ದೇವರಾದ ಶ್ರೀಕೃಷ್ಣನಿಗೆ ಅಪಹಾಸ್ಯ ಮಾಡಿದ್ದಾರೆ ಎಂಬ ಆರೋಪದಡಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ.
ಮಂಗಳೂರಿನ ಪಚ್ಚಿನಾಡಿಯಲ್ಲಿ ಇತ್ತೀಚಿಗೆ ನಡೆದ ಆಟಿಕೂಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ವೇಷಧಾರಿಯಾಗಿದ್ದ ರವಿ ರಾಮಕುಂಜ ಎಂಬವರು ಅಶೀಲ ಭಂಗಿ ಹಾಗು ಅಶ್ಲೀಲ ಪದಗಳನ್ನು ಬಳಸುವ ಮೂಲಕ ಶ್ರೀಕೃಷ್ಣ ಆರಾಧಕರಾದ ಹಿಂದೂಗಳ ಭಾವನೆಗೆ ಅತೀವ ನೋವನ್ನುಂಟುಮಾಡಿದ್ದಾರೆ ಎಂದು ಕಂಪ್ಲೇಂಟ್ ನಲ್ಲಿ ಹೇಳಿಕೊಂಡಿದ್ದಾರೆ.
ಈ ರೀತಿಯ ಘಟನೆಗಳಿಂದ ಸಮಾಜದಲ್ಲಿ ಅಶಾಂತಿಯ ವಾತಾವರಣ ಉಂಟಾಗಿ ಸಮುದಾಯದ ಒಳಗೆ ಗಲಭೆಯಾಗುವ ಸಾಧ್ಯತೆ ಹೆಚ್ಚು ಇದೆ. ಆದ್ದರಿಂದ ರವಿ ರಾಮಕುಂಜ ಹಾಗೂ ನಿರ್ದೇಶಕ ಪುಷ್ಪರಾಜ್ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಾಲಚಂದ್ರ ಸೊರಕೆ ಹಾಗೂ ಹರಿಪ್ರಸಾದ್ ನೆಲ್ಲಿಕಟ್ಟೆ ದೂರಿನಲ್ಲಿ ತಿಳಿಸಿದ್ದಾರೆ.
ದೂರು ನೀಡುವ ಸಂದರ್ಭದಲ್ಲಿ ಸತೀಶ್ ನಾಯ್ಕ್, ವಕೀಲ ಚಂದ್ರಹಾಸ, ಗೋಪಾಲ್ ಎಂ. ಆರ್, ಬಾಲಕೃಷ್ಣ ರೈ ಇಳಂತಾಜೆ, ಸಂದೇಶ್ ನಾಯ್ಕ್, ರಾಜೇಶ್, ಪ್ರಸಾದ್ ರೈ, ಚಂದ್ರಶೇಖರ್, ಹರೀಶ್ ಮಿನಿಪದವು, ಶ್ರೀಧರ್ ಪೂಜಾರಿ ಮತ್ತಿತರು ಉಪಸ್ಥಿತರಿದ್ದರು ಎಂದು ತಿಳಿಸಲಾಗಿದೆ.