ಕೊಪ್ಪಳ: ಹಿಂದೂ ಯುವಕ ಮುಸ್ಲಿಂ ಹುಡುಗಿಯನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಆತನನ್ನು ಕೊಚ್ಚಿ ಕೊಲೆಗೈದ ಘಟನೆ ಭಾನುವಾರ ರಾತ್ರಿ ಕೊಪ್ಪಳ ನಗರದ ವಾರ್ಡ್ 3ರ ಮಸೀದಿ ಮುಂಭಾಗದಲ್ಲಿ ನಡೆದಿದೆ. ಈ ಘಟನೆಯ ಭೀಕರತೆಯಿಂದಾಗಿ ಇಡೀ ನಗರದ ಜನ ಬೆಚ್ಚಿ ಬೀಳಿದ್ದಾರೆ.
ಕೊಲೆಯಾದ ಯುವಕ ಗವಿಸಿದ್ದಪ್ಪ ನಾಯಕ್ ರಾತ್ರಿ ವೇಳೆ ಬಹದ್ದೂರ ಬಂಡಿ ರಸ್ತೆಯಿಂದ ಬರುತ್ತಿದ್ದಾಗ ಸಾದಿಕ್ ಕೋಲ್ಕಾರ್ ಎಂಬಾತ ಅಡ್ಡ ಹಾಕಿ ಕುತ್ತಿಗೆ ಭಾಗಕ್ಕೆ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದಿದ್ದಾನೆ. ಗವಿಸಿದ್ದಪ್ಪ ನಾಯಕ್ ತಂದೆ ನಿಂಗಜ್ಜ ಟಣಕನಲ್ ಅವರು ಆರೋಪಿ ಸಾದಿಕ್ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.
ಗವಿಸಿದ್ದಪ್ಪ ಕಳೆದ ಎರಡು ವರ್ಷಗಳಿಂದ ಗೌರಿ ಅಂಗಳ ಸಮೀಪದ ಮುಸ್ಲಿಂ ಯುವತಿಯೊಬ್ಬಳನ್ನು ಪ್ರೀತಿಸಿದ್ದ. ಜೊತೆಗೆ ಮನೆ ಬಿಟ್ಟು ಓಡಿ ಸಹ ಹೋಗಿದ್ದರು. ಈ ಕುರಿತಂತೆ ನಾಲ್ಕೈದು ಬಾರಿ ಪಂಚಾಯತಿ ಸಹ ಮಾಡಲಾಗಿತ್ತು ಎನ್ನಲಾಗಿದೆ. ಆದರೆ ಅವರಿಬ್ಬರ ಸಂಬಂಧ ಮುರಿದುಹೋಗಲಿಲ್ಲ. ಇದೇ ಕಾರಣಕ್ಕೆ ಸಾದಿಕ್ ಕೋಲ್ಕಾರ್ ಆತನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ಈ ಹಿಂದೆ ಆರೋಪಿ ಸಾದಿಕ್ ಕೋಲ್ಕಾರ್ ಅದೇ ಹುಡುಗಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಅವರ ನಡುವೆ ಬ್ರೇಕ್ ಅಪ್ ಆದ ನಂತರ ಆಕೆ ಗವಿಸಿದ್ದಪ್ಪನ ಜೊತೆ ಪ್ರೀತಿಯಲ್ಲಿ ಮುಳುಗಿದ್ದಳು. ಈ ಕಾರಣಕ್ಕಾಗಿ ಆರೋಪಿ ಸಾದಿಕ್ ಕೋಲ್ಕಾರ್ ಕೊಲೆಯಾದ ಗವಿಸಿದ್ದಪ್ಪನ ಜೊತೆ ಹಲವಾರು ಬಾರಿ ಜಗಳ ಕೂಡ ನಡೆಸಿದ್ದಾನೆ.
ನಿನ್ನೆ ರಾತ್ರಿ 8 ಗಂಟೆ ಹೊತ್ತಿಗೆ ಮಸೀದಿ ಬಳಿ ಬೈಕ್ನಲ್ಲಿ ಬರುತ್ತಿದ್ದ ಗವಿಸಿದ್ದಪ್ಪನನ್ನು ತಡೆದು ನಿಲ್ಲಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ನೇರವಾಗಿ ಬಂದು ನಗರ ಠಾಣೆಗೆ ಶರಣಾಗಿದ್ದಾನೆ. ಆತ ಸೇರಿದಂತೆ ನಾಲ್ವರ ವಿರುದ್ಧ ಸೆಕ್ಷನ್ 103(1) ಬಿಎನ್ಎಸ್ 2023 ಕಲಂ 3(2)ವಿ, ಎಸ್ಸಿ-ಎಸ್ಟಿ ಕಾಯ್ದೆ 1989 ಅಡಿಯಲ್ಲಿ ದೂರು ದಾಖಲಾಗಿದೆ.