ಬಂಟ್ವಾಳ: ತಾಲೂಕಿನ ಹಲವೆಡೆಗಳಲ್ಲಿ ಬೀದಿ ನಾಯಿಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಾಯಿಗಳ ದಂಡು ಸಾರ್ವಜನಿಕರನ್ನು ಆತಂಕಕ್ಕೆ ಸಿಲುಕಿಸಿದೆ.
ಬಿ.ಸಿ.ರೋಡ್, ಬಂಟ್ವಾಳ ಪೇಟೆ, ಪಾಣೆಮಂಗಳೂರು, ಕೈಕುಂಜೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸೇರಿದಂತೆ ಜನಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿ ಬೀದಿ ನಾಯಿಗಳ ರಂಪಾಟ ತಾಳಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದೇ ವಿಷಯವನ್ನು ಕಳೆದ ಪುರಸಭೆ ಸಭೆ ಹಾಗೂ ಕೆಡಿಪಿ ಸಭೆಗಳಲ್ಲಿ ಚರ್ಚಿಸಲಾಗಿತ್ತು. ಶಾಸಕರು ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ, ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಒಳಗಡೆ ನಾಯಿಗಳ ದಂಡು ಮಲಗುತ್ತಿದ್ದು, ಪ್ರಯಾಣಿಕರನ್ನು ಆತಂಕಕ್ಕೆ ಒಳಪಡಿಸುತ್ತಿದೆ. ರಸ್ತೆಯ ಬದಿಯಲ್ಲಿ ಎಸೆಯುವ ತ್ಯಾಜ್ಯವನ್ನು ನಾಯಿಗಳು ಎಳೆದು ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಅಸ್ವಚ್ಛಗೊಳಿಸುವ ಸ್ಥಿತಿ ನಿರ್ಮಾಣವಾಗಿದೆ. ಬೀದಿ ನಾಯಿಗಳ ಸಮಸ್ಯೆಯಿಂದ ರೆಬೀಸ್ ರೋಗ ಹರಡುವ ಭೀತಿ ಕೂಡ ಜನರಲ್ಲಿ ಮನೆ ಮಾಡಿದೆ.
ಸಂಬಂಧಪಟ್ಟ ಆಡಳಿತ ಮಂಡಳಿ, ಪುರಸಭೆ ಮತ್ತು ಗ್ರಾಮ ಪಂಚಾಯತ್‌ಗಳು ಶೀಘ್ರ ಕ್ರಮ ಕೈಗೊಳ್ಳದಿದ್ದರೆ, ಸಾರ್ವಜನಿಕರು, ವಿಶೇಷವಾಗಿ ಶಾಲಾ ಮಕ್ಕಳು, ಆತಂಕದಲ್ಲೇ ಸಂಚರಿಸುವಂತಾಗುವುದಲ್ಲದೆ, ಬೀದಿ ನಾಯಿಗಳಿಂದ ಜೀವಾಪಾಯ ಉಂಟಾಗುವ ಪರಿಸ್ಥಿತಿ ಎದುರಾಗಬಹುದು ಎಂದು ಜನತೆ ಆತಂಕ ವ್ಯಕ್ತಪಡಿಸಿದ್ದಾರೆ.