ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರಿನಲ್ಲಿ ಭದ್ರತಾ ದೋಷವೊಂದು ಬೆಳಕಿಗೆ ಬಂದಿದ್ದು, ಲಗೇಜ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ನಾಲ್ವರು ಏರ್ ಇಂಡಿಯಾ SATS ಕಂಪನಿಯಲ್ಲಿ ಲೋಡರ್‌ಗಳಾಗಿ ಹಾಗೂ ಅನ್ಲೋಡರ್‌ಗಳಾಗಿ ಕೆಲಸ ಮಾಡುತ್ತಿದ್ದವರು, ಇವರು ಪ್ರಯಾಣಿಕರ ಲಗೇಜ್‌ನಿಂದ ಚಿನ್ನಾಭರಣ ಕದ್ದಿರುವ ಆರೋಪ ಎದುರಿಸುತ್ತಿದ್ದಾರೆ.
ಕಳವು ಪ್ರಕರಣದಲ್ಲಿ ಬಂಧಿತರಾದವರು, ಮಂಗಳೂರಿನ ಕಂದಾವರದ ನಿತಿನ್, ಮೂಡುಪೆರಾರ್ ಸದಾನಂದ, ಬಜ್ಪೆಯ ರಾಜೇಶ್ ಮತ್ತು ಪ್ರವೀಣ್ ಫೆರ್ನಾಂಡಿಸ್ ಎಂದು ಗುರುತಿಸಲಾಗಿದೆ.
ಈ ನಾಲ್ವರೂ ಆರೋಪಿ 9 ವರ್ಷಗಳಿಂದ ಏರ್ ಇಂಡಿಯಾ SATS ನಲ್ಲಿ ಉದ್ಯೋಗದಲ್ಲಿದ್ದರು. ಇವರು ಕದ್ದ ಚಿನ್ನಾಭರಣವನ್ನು ಮೂಡುಪೆರಾರ್‌ನ ರವಿರಾಜ್ ಎಂಬವರಿಗೆ ಮಾರಾಟ ಮಾಡಿದ್ದರು.
ಈ ಪ್ರಕರಣದಲ್ಲಿ, ಬೆಂಗಳೂರಿನಿಂದ ಆಗಸ್ಟ್ 30ರಂದು ಮಂಗಳೂರಿಗೆ ಆಗಮಿಸಿದ್ದ ಮಹಿಳಾ ಪ್ರಯಾಣಿಕರೊಬ್ಬರು, ಬ್ಯಾಗೇಜ್ ಬೆಲ್ಟ್‌ನಲ್ಲಿ ತಮ್ಮ ಲಗೇಜ್ ತೆಗೆದುಕೊಂಡಾಗ 4.5 ಲಕ್ಷ ರೂ. ಮೌಲ್ಯದ 56 ಗ್ರಾಂ ಚಿನ್ನಾಭರಣ ಕಳವಾಗಿರುವುದನ್ನು ಗಮನಿಸಿದ್ದರು. ಅವರು ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ತನಿಖೆ ಪ್ರಾರಂಭವಾಯಿತು.
ವಿಚಾರಣೆ ವೇಳೆ ಆರೋಪಿಗಳು ದೋಷ ಒಪ್ಪಿಕೊಂಡಿದ್ದು, ಕದ್ದ ಚಿನ್ನವನ್ನು ರವಿರಾಜ್‌ಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ಪೊಲೀಸರು ಈಗಾಗಲೇ ಸುಮಾರು 50 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಈ ತಂಡವು 2025ರ ಜನವರಿಯಲ್ಲಿ ಮತ್ತೊಂದು ಪ್ರಕರಣದಲ್ಲಿ ಮನೋಹರ್ ಶೆಟ್ಟಿ ಎಂಬ ಪ್ರಯಾಣಿಕನ ಲಗೇಜ್‌ನಿಂದ 2 ಲಕ್ಷ ರೂ. ನಗದು ಕದ್ದಿರುವುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಯಲ್ಲಿ ಇಡಲಾಗಿದೆ.
ಈ ಘಟನೆ ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಯ ಮೇಲೆಯೇ ಗಂಭೀರ ಪ್ರಶ್ನೆ ಎತ್ತಿರುವಂತಾಗಿದೆ.