ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಡೆದ ಶವ ಹೂತಿಟ್ಟ ಪ್ರಕರಣ ಸಂಬಂಧವಾಗಿ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ (SIT) ತನ್ನ ಕಾರ್ಯಚಟುವಟಿಕೆಗೆ ವೇಗ ನೀಡಿದ್ದು, ಈ ತನಿಖೆಯ ವ್ಯಾಪ್ತಿ ಈಗ ಭೀಕರ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದತ್ತ ವಿಸ್ತರಿಸುತ್ತಿದೆಯೆ ಎಂಬ ಶಂಕೆಗೆ ತಲುಪಿದೆ.
ಇದೇ ಹಿನ್ನೆಲೆಯಲ್ಲಿ, ಸೌಜನ್ಯ ಅವರ ಕುಟುಂಬ ಮತ್ತು ಹೋರಾಟಗಾರರು ಕೆಲವು ವರ್ಷಗಳಿಂದ ನಿರಂತರವಾಗಿ ಆರೋಪಿಸುತ್ತಿರುವ ಉದ್ಯಮಿಗಳು ಉದಯ್ ಕುಮಾರ್ ಜೈನ್, ಧೀರಜ್ ಕೆಲ್ಲಾ ಮತ್ತು ಮಲ್ಲಿಕ್ ಜೈನ್ ಅವರಿಗೆ SIT ನಿಂದ ಸಮನ್ಸ್ ಜಾರಿ ಮಾಡಲಾಗಿದೆ. ಸೌಜನ್ಯ ಅವರ ತಾಯಿಯು ಮರು ತನಿಖೆಗೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಇಂದು ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಹಾಜರಾದ ಉದಯ್ ಕುಮಾರ್ ಜೈನ್, ತನಿಖೆಗೆ ತಮ್ಮ ಸಂಪೂರ್ಣ ಸಹಕಾರವಿದೆ ಎಂದು ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದರು. ಆದರೆ ಅವರು ಈ ಕ್ರಮದ ಹಿಂದಿನ ಉದ್ದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಶವ ಹೂತಿಟ್ಟ ಪ್ರಕರಣ ಎಲ್ಲೆಡೆ ಚರ್ಚೆಗೆ ಒಳಪಟ್ಟಿದ್ದಂತೆಯೇ, ಅದರ ದಿಕ್ಕು ಬದಲಾಗಿಸಲು ಈ ಕದಡಿ ಹಾಕುವ ಪ್ರಯತ್ನವಿರಬಹುದು ಎಂದು ಆರೋಪಿಸಿದ್ದಾರೆ.
ಈ ಬೆಳವಣಿಗೆಯಿಂದ ಸೌಜನ್ಯ ಪ್ರಕರಣ ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿರುವುದು ಸ್ಪಷ್ಟವಾಗಿದೆ. ನ್ಯಾಯಕ್ಕಾಗಿ ವರ್ಷಗಳಿಂದ ಹೋರಾಡುತ್ತಿರುವ ಸೌಜನ್ಯ ಕುಟುಂಬದ ಮನವಿ ಫಲಿಸಬಹುದೆ ಎಂಬ ನಿರೀಕ್ಷೆಯಿದೆ. ಇನ್ನು ಮುಂದೆ ಈ ತನಿಖೆ ನಿಜವಾಗಿ ಸತ್ಯ ಹೊರತರುವತ್ತ ಸಾಗುತ್ತದೆಯೋ, ಅಥವಾ ಬೇರೆ ಪ್ರಕರಣಗಳ ಬೆಳಕು ತಡೆಯಲು ನಡೆದ ರಾಜಕೀಯ ಪ್ರೇರಿತ ನಡೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ನಿರೀಕ್ಷಿಲಾಗಿದೆ.