ದೆಹಲಿ: ಧರ್ಮಸ್ಥಳದಲ್ಲಿ ನಡೆದ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ (NIA) ತನಿಖೆ ನಡೆಸಬೇಕೆಂದು ಸ್ವಾಮೀಜಿಗಳ ನಿಯೋಗ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ದೆಹಲಿಯ ಅವರ ಕಚೇರಿಯಲ್ಲಿ ಭೇಟಿ ಮಾಡಿದ ನಿಯೋಗವು ಈ ಪ್ರಕರಣವು ಸಾಮಾನ್ಯ ಕಾನೂನು ಸುವ್ಯವಸ್ಥೆಯ ವಿಚಾರವಲ್ಲ, ರಾಷ್ಟ್ರದ ಭದ್ರತೆಗೆ ಸಂಬಂಧಿಸಿದಂತೆ ಗಂಭೀರ ಹಿನ್ನೆಲೆಯನ್ನು ಹೊಂದಿದೆ ಎಂದು ಒತ್ತಿ ಹೇಳಿದೆ.
ಮಂಗಳೂರು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ನೇತೃತ್ವದಲ್ಲಿ ನಿಯೋಗ ಗೃಹ ಸಚಿವರಿಗೆ ಮನವಿ ಸಲ್ಲಿಸಿತು. “ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದೇನೆ. ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಅಮಿತ್ ಷಾ ಭರವಸೆ ನೀಡಿದ್ದಾರೆ.
ಸ್ವಾಮೀಜಿಗಳು ಜನರಲ್ಲಿ ಹರಡುತ್ತಿರುವ ಆತಂಕವನ್ನು ಉಲ್ಲೇಖಿಸಿ, ನಿಷ್ಪಕ್ಷಪಾತ ಹಾಗೂ ರಾಷ್ಟ್ರೀಯ ಮಟ್ಟದ ತನಿಖೆ ಮಾತ್ರ ಸತ್ಯ ಹೊರತರುವಲ್ಲಿ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.