ಪುತ್ತೂರು ತಾಲೂಕಿನ ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿ ನಿನ್ನೆ ತಡ ರಾತ್ರಿ ಅಮಾನವೀಯ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ದೇಜಪ್ಪ ಮೂಲ್ಯ ಅವರ ಮನೆಯಿಂದ ಹಾಲು ನೀಡುತ್ತಿದ್ದ ದನವನ್ನು ಕದ್ದು, ಅದನ್ನು ಮಾಲೀಕರ ತೋಟದಲ್ಲೇ ಕಡಿದು ಮಾಂಸ ಮಾಡಲಾಗಿದ್ದು, ಅದರ ತ್ಯಾಜ್ಯಗಳನ್ನು ಅಲ್ಲಿ ಬಿಸಾಡಲಾಗಿದೆ.
ಈ ಘಟನೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ತಕ್ಷಣ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿವೆ.
ಈಗಾಗಲೇ ಸ್ಥಳಕ್ಕೆ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿ, ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ “ಮಾರಾಟಕ್ಕೆ ದನ ಇದೆಯೇ?” ಎಂದು ವಿಚಾರಣೆ ನಡೆಸಿದ್ದನು ಎಂದು ಮನೆಯವರು ತಿಳಿಸಿದ್ದಾರೆ. ಆತನನ್ನು ಮೊದಲು ವಿಚಾರಣೆ ಮಾಡಬೇಕು ಎಂದು ಪುತ್ತಿಲ ಒತ್ತಾಯಿಸಿದ್ದಾರೆ.
ಇಂತಹ ಹೇಯ ಕೃತ್ಯವನ್ನು ಹಿಂದೂ ಸಮಾಜ ಯಾವತ್ತೂ ಸಹಿಸುವುದಿಲ್ಲ ಎಂದು ಸಂಘಟನೆಗಳು ಎಚ್ಚರಿಕೆ ನೀಡಿದ್ದು, ತಪ್ಪಿತಸ್ಥರನ್ನು ತಕ್ಷಣ ಬಂಧಿಸದಿದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.