16 September 2025 | Join group

ಕಲ್ಲಡ್ಕ ಸರ್ವಿಸ್ ರಸ್ತೆ ತುರ್ತು ದುರಸ್ತಿ ಬೇಡಿಕೆ – ಸಾರ್ವಜನಿಕರಿಂದ ಒತ್ತಾಯ

  • 05 Sep 2025 01:46:09 PM

ಬಂಟ್ವಾಳ, ಕಲ್ಲಡ್ಕ: ರಾಷ್ಟ್ರೀಯ ಹೆದ್ದಾರಿ ಬಿ.ಸಿ. ರೋಡ್ – ಅಡ್ಡಹೊಳೆ ಚತುಷ್ಪಥ ರಸ್ತೆ ಸಂಪೂರ್ಣ ಹಂತದಲ್ಲಿದ್ದರೂ, ಕಲ್ಲಡ್ಕದಲ್ಲಿ ನಿರ್ಮಿತವಾದ ಫ್ಲೈಓವರ್ ಕೆಳಗಿನ ಸರ್ವಿಸ್ ರಸ್ತೆಯ ಆರಂಭ ಮತ್ತು ಅಂತ್ಯದ ಭಾಗಗಳು ಅಧೋಗತಿಗೆ ತುತ್ತಾಗಿವೆ.

 

ಕುದ್ರೆಬೆಟ್ಟು ಫ್ಲೈಓವರ್ ಆರಂಭವಾಗುವ ಸ್ಥಳದಲ್ಲಿ ಒಂದು ಬದಿಯ ಸರ್ವಿಸ್ ರಸ್ತೆ ಬಂದ್ ಮಾಡಿರುವುದರಿಂದ, ಎರಡು ಕಡೆಯಿಂದ ಬರುವ ವಾಹನಗಳು ಒಂದೇ ಸರ್ವಿಸ್ ರಸ್ತೆಯಲ್ಲಿ ಸಂಚರಿಸುತ್ತಿವೆ. ಈ ವೇಳೆ ದೊಡ್ಡ ವಾಹನಗಳು ಎದುರು ಬದರು ಬಂದಾಗ ಪಾಸ್ ಆಗಲು ಸಾಕಷ್ಟು ಪರದಾಡಬೇಕಾಗುತ್ತದೆ. ಕಾರಣ, ಸರ್ವಿಸ್ ರಸ್ತೆ ಕಿರಿದಾಗಿರುವುದಲ್ಲದೆ, ಅದರ ಸ್ಥಿತಿಯೂ ಹದಗೆಟ್ಟಿದ್ದು ಹೊಂಡಗಳಿಂದ ತುಂಬಿಕೊಂಡಿದೆ. ಇಂತಹ ರಸ್ತೆಯಲ್ಲಿ ವಾಹನ ಚಲಾವಣೆ ದೊಡ್ಡ ಸವಾಲಾಗಿದೆ.

ಅದೇ ರೀತಿ, ಬೋಳಂಗಡಿಯಿಂದ ಕೆ.ಸಿ. ರೋಡ್ ತನಕ ಫ್ಲೈಓವರ್ ಕೆಳಗಿನ ರಸ್ತೆಯ ಸ್ಥಿತಿ ಮತ್ತಷ್ಟು ದುರವಸ್ಥೆಯಲ್ಲಿದೆ. ಹೊಂಡಗಳಿಂದ ತುಂಬಿದ ಈ ರಸ್ತೆಯಲ್ಲಿ ವಾಹನಗಳು ಜಿಗಿದುಕೊಂಡು ಸಂಚರಿಸುವಂತಾಗಿದೆ.

 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಸರ್ವಿಸ್ ರಸ್ತೆಗಳ ಕಾಮಗಾರಿಯನ್ನು ಕಡೆಗಣಿಸಿರುವುದರಿಂದ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕಲ್ಲಡ್ಕ ಫ್ಲೈಓವರ್ ಮೇಲಿನ ಸಂಚಾರ ಸುಗಮವಾಗಿದ್ದರೂ, ಕೆಳಗಿನ ಸರ್ವಿಸ್ ರಸ್ತೆಯಲ್ಲಿ ಸಂಚರಿಸುವವರು ಕಷ್ಟ ಅನುಭವಿಸುವಂತಾಗಿದೆ.

 

ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ತಕ್ಷಣ ಗಮನ ಹರಿಸಿ, ಕಲ್ಲಡ್ಕ ಫ್ಲೈಓವರ್ ಕೆಳಗಿನ ಸರ್ವಿಸ್ ರಸ್ತೆಗಳನ್ನು ಸರಿಪಡಿಸಿ ಸಂಚಾರ ಸುಗಮಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.