16 September 2025 | Join group

ಸೆಪ್ಟೆಂಬರ್ 7ರ ಹವಾಮಾನ: ಇಂದು ರಾತ್ರಿ ಖಗ್ರಾಸ ಚಂದ್ರಗ್ರಹಣ – ಕರಾವಳಿಯಲ್ಲಿ ತುಂತುರು, ಒಳನಾಡಿನಲ್ಲಿ ಸಾಧಾರಣ ಮಳೆ

  • 07 Sep 2025 10:48:40 AM

ಮೂಲ: ಕಂಪದಕೋಡಿ ವೆದರ್ ರಿಪೋರ್ಟ್ | ಪ್ರಕಟಣೆ: Sudhavani Weather Desk

 

ಇಂದು ರಾತ್ರಿ ಖಗ್ರಾಸ ಚಂದ್ರಗ್ರಹಣ. ರಾತ್ರಿ 9:57ರಿಂದ ಚಂದ್ರನ ಮೇಲೆ ಭೂಮಿಯ ನೆರಳು ಬಿದ್ದು ಗ್ರಹಣ ಆರಂಭವಾಗಲಿದೆ. ಮುಂಜಾನೆ 2:22ಕ್ಕೆ ಗ್ರಹಣ ಅಂತ್ಯಗೊಳ್ಳಲಿದೆ. ದೇಶಾದ್ಯಂತ ಪೂರ್ಣ ಚಂದ್ರಗ್ರಹಣ ವೀಕ್ಷಿಸಬಹುದು.

ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ನಿನ್ನೆ ಮಳೆ ಕಡಿಮೆಯಾಗಿದ್ದು, ಕೆಲವೆಡೆ ಮಾತ್ರ ಸಣ್ಣ ಮಳೆಯಾಗಿದೆ. ದಕ್ಷಿಣ ಒಳನಾಡಿನ ಹಲವೆಡೆ ಸಾಮಾನ್ಯ ಮಳೆ ದಾಖಲಾಗಿದೆ.

 

ಇಂದಿನ ಮುನ್ಸೂಚನೆ ಪ್ರಕಾರ, ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಗಲು ಮೋಡ–ಬಿಸಿಲಿನ ವಾತಾವರಣ ಇರಲಿದ್ದು, ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆ ಇದೆ. ರಾತ್ರಿ ಕೆಲವೆಡೆ ಸಹ ತುಂತುರು ಮಳೆಯಾಗಬಹುದು.

 

ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 4–5 ದಿನ ಮಳೆ ಕಡಿಮೆ ಇದ್ದು, ಭಾಗಶಃ ಮೋಡದ ವಾತಾವರಣ ಮುಂದುವರೆಯಬಹುದು. ಸೆಪ್ಟೆಂಬರ್ 13ರಿಂದ ಪ್ರತಿದಿನ ಒಂದೆರಡು ಮಳೆ ಬೀಳುವ ಸಾಧ್ಯತೆಗಳಿವೆ.

 

ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾಗಶಃ ಮೋಡವಿರಲಿದ್ದು, ಕರಾವಳಿಗೆ ಹೊಂದಿಕೊಂಡಿರುವ ಘಟ್ಟಪ್ರದೇಶಗಳಲ್ಲಿ ಮಧ್ಯಾಹ್ನದ ನಂತರ ಸಣ್ಣ ಮಳೆಯ ಮುನ್ಸೂಚನೆ ಇದೆ. ಕೊಡಗು ಹಾಗೂ ಹಾಸನ ಜಿಲ್ಲೆಯ ಒಳನಾಡು ಪ್ರದೇಶಗಳಲ್ಲಿ ಸೆಪ್ಟೆಂಬರ್ 10ರವರೆಗೆ ಸಂಜೆ ಗುಡುಗು ಮಳೆಯ ಸಾಧ್ಯತೆ ಇದೆ.

 

ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಹಲವೆಡೆ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿಯೂ ಕೆಲವೆಡೆ ಸಣ್ಣ ಮಳೆಯ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಮುಂದುವರಿಯಲಿದೆ.

 

ಉತ್ತರ ಒಳನಾಡಿನ ಗದಗ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಮೋಡವಿರಬಹುದು. ಉಳಿದ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಒಣಹವೆಯೇ ಮುಂದುವರಿಯಲಿದೆ. ಸೆಪ್ಟೆಂಬರ್ 10ರಿಂದ ಕಲ್ಬುರ್ಗಿ, ಬೀದರ್ ಜಿಲ್ಲೆಗಳಲ್ಲಿ ಗುಡುಗು ಮಳೆಯ ಮುನ್ಸೂಚನೆ ಇದೆ.

 

ಗುಜರಾತ್ ರಾಜ್ಯದಲ್ಲಿರುವ ಗಾಳಿಯ ತಿರುಗುವಿಕೆ ನಾಳೆ ಪಾಕಿಸ್ತಾನದತ್ತ ಚಲಿಸಬಹುದು. ನಂತರ ಮಧ್ಯಭಾರತದಲ್ಲಿ ಮಳೆ ಕಡಿಮೆಯಾಗಲಿದ್ದು, ಈಶಾನ್ಯ ಭಾರತದಲ್ಲಿ ಮಳೆ ಮುಂದುವರಿಯಲಿದೆ. ತಮಿಳುನಾಡಿನಲ್ಲಿ ಪೂರ್ವದ ಗುಡುಗು ಮಳೆ ಆರಂಭವಾಗಲಿದ್ದು, ಇದು ಕರ್ನಾಟಕದ ಒಳನಾಡಿನ ತನಕ ವಿಸ್ತರಿಸಬಹುದು. ಕರಾವಳಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 13ರಿಂದ 20ರವರೆಗೆ ಕೆಲವೆಡೆ ಮಳೆಯ ಸಾಧ್ಯತೆ ಇದೆ. ಸಧ್ಯ ಮುಂಗಾರು ದುರ್ಬಲವಾಗಿದ್ದು, ವಾಯುಭಾರ ಕುಸಿತವಾದರೆ ಮಾತ್ರ ಉತ್ತಮ ಮಳೆಯಾಗಬಹುದು.