24 December 2025 | Join group

ಮಂಗಳೂರು ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ತೊಂದರೆ: ಅಂತರರಾಷ್ಟ್ರೀಯ-ದೇಶೀಯ ವಿಮಾನಗಳು ಡೈವರ್ಟ್, ಪ್ರಯಾಣಿಕರು ನಿರಾಶೆ

  • 09 Sep 2025 10:45:19 AM

ಮಂಗಳೂರು: ದಟ್ಟ ಮಂಜಿನ ಕಾರಣ ಸೋಮವಾರ ಬೆಳಿಗ್ಗೆ ಮಂಗಳೂರಿನಲ್ಲಿ ಲ್ಯಾಂಡಿಂಗ್‌ ಸಾಧ್ಯವಾಗದೆ ಒಟ್ಟು ನಾಲ್ಕು ವಿಮಾನಗಳು ಬೆಂಗಳೂರಿಗೆ ಡೈವರ್ಟ್‌ ಆಗಿರುವ ಘಟನೆ ನಡೆದಿದೆ.

 

ಅಬುಧಾಬಿ, ದುಬೈ ಹಾಗೂ ಬಹರೈನ್‌ನಿಂದ ಬಂದ ವಿಮಾನಗಳು ಮೊದಲಿಗೆ ಬೆಂಗಳೂರಿಗೆ ಇಳಿದಿದ್ದು, ಬಳಿಕ ಮಧ್ಯಾಹ್ನ ಮಂಗಳೂರಿಗೆ ಆಗಮಿಸಿವೆ. ಈ ನಡುವೆ ಮಂಗಳೂರು–ಹೈದರಾಬಾದ್‌ ವಿಮಾನ ಸಂಚಾರವೇ ರದ್ದಾಗಿದೆ.

 

ಮುಂಬೈ ವಿಮಾನ ತಡವಾಗಿ ಬಂದರೆ, ಬೆಂಗಳೂರಿನಿಂದ ಮಂಗಳೂರಿಗೆ ಬರಬೇಕಿದ್ದ ವಿಮಾನವೂ ಮರಳಿ ಬೆಂಗಳೂರಿಗೆ ತೆರಳಿ ನಂತರ ಲ್ಯಾಂಡ್‌ ಆಯಿತು. ವಿಮಾನ ಬದಲಾವಣೆ, ತಾಸುಗಟ್ಟಲೆ ಕಾಯುವ ಪರಿಸ್ಥಿತಿಯಿಂದ ಪ್ರಯಾಣಿಕರು ಹಾಗೂ ಏರ್‌ಪೋರ್ಟ್‌ನಲ್ಲಿ ನಿರೀಕ್ಷೆಯಲ್ಲಿದ್ದವರಲ್ಲಿ ನಿರಾಶೆ ವ್ಯಕ್ತವಾಯಿತು.

 

ಅಬುಧಾಬಿಯಿಂದ ಮುಂಜಾನೆ 4.25ಕ್ಕೆ ಮಂಗಳೂರಿನಲ್ಲಿ ಲ್ಯಾಂಡ್ ಆಗಬೇಕಾಗಿದ್ದ ವಿಮಾನವು ಲ್ಯಾಂಡಿಂಗ್‌ ಸಾಧ್ಯವಾಗದೆ ಬೆಂಗಳೂರಿಗೆ ತೆರಳಿತ್ತು. ಅಲ್ಲಿಂದ ಮತ್ತೊಂದು ವಿಮಾನದಲ್ಲಿ ಪ್ರಯಾಣಿಕರನ್ನು ಬೆಳಗ್ಗೆ 10.20ರ ಸುಮಾರಿಗೆ ಮಂಗಳೂರಿಗೆ ಕರೆತರಲಾಯಿತು. ದುಬೈಯಿಂದ ಮಂಗಳೂರಿಗೆ ಮುಂಜಾನೆ ತಲುಪಬೇಕಾಗಿದ್ದ ವಿಮಾನವು ಬೆಂಗಳೂರಿಗೆ ಡೈವರ್ಟ್‌ ಆಗಿ, ಬಳಿಕ ಮಧ್ಯಾಹ್ನ 1.05ಕ್ಕೆ ಮಂಗಳೂರಿಗೆ ತಲುಪಿದೆ ಎಂದು ತಿಳಿದು ಬಂದಿದೆ.

 

ಬಹರೈನ್‌ನಿಂದ ಬೆಳಗ್ಗೆ 7.40ಕ್ಕೆ ಮಂಗಳೂರಿನಲ್ಲಿ ಇಳಿಯಬೇಕಾಗಿದ್ದ ವಿಮಾನವು ಕೂಡ ಲ್ಯಾಂಡಿಂಗ್‌ ಸಾಧ್ಯವಾಗದೆ ಬೆಂಗಳೂರಿಗೆ ತೆರಳಿ, ನಂತರ ಮಧ್ಯಾಹ್ನ 12ರ ಸುಮಾರಿಗೆ ಮಂಗಳೂರಿಗೆ ಆಗಮಿಸಿತು. ಇದೇ ರೀತಿಯಲ್ಲಿ ದೇಶೀಯ ವಿಮಾನಗಳಲ್ಲಿಯೂ ಲ್ಯಾಂಡಿಂಗ್‌ ಸಮಸ್ಯೆ ಉಂಟಾಗಿ, ಕೆಲವು ವಿಮಾನಗಳು ತಡವಾಗಿ ಬಂದಿದ್ದು, ಕೆಲವು ಮರಳಿ ತೆರಳಿದ ಘಟನೆಗಳು ನಡೆದಿವೆ ಎಂದು ವರದಿಯಾಗಿದೆ.

 

ಕಾರಣವಾಗಿ ಬೆಳಿಗ್ಗಿನ ಗಾಢ ಮಂಜಿನಿಂದ ಪೈಲೆಟ್‌ಗಳಿಗೆ ರನ್‌ವೇ ಸ್ಪಷ್ಟ ಕಾಣದ ಕಾರಣ ಲ್ಯಾಂಡಿಂಗ್‌ ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.