ನವದೆಹಲಿ: ಇತ್ತೀಚಿಗಷ್ಟೇ “ಧರ್ಮಸ್ಥಳ ಚಲೋ” ಅಭಿಯಾನ ನಡೆಸಿದ ರಾಜ್ಯ ಬಿಜೆಪಿ ಪಕ್ಷ, ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಧರ್ಮಸ್ಥಳದ ಹೆಸರನ್ನು ಕಾಣದ ಕೈಗಳು ಕೆಡಿಸಲು ಪ್ರಯತ್ನಸುತ್ತಿದೆ ಎಂದು ಆರೋಪಮಾಡಿತ್ತು. ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಬೃಹತ್ ಸಭೆ ನಡೆಸಿ, ನಾವು ಧರ್ಮಸ್ಥಳದ ಜೊತೆಗೆ ಇದ್ದೇವೆ ಎನ್ನುವ ಸ್ಪಷ್ಟ ಸಂದೇಶವನ್ನು ರಾಜ್ಯದ ಜನತೆಗೆ ನೀಡಿತ್ತು.
ಬುರುಡೆ ಗ್ಯಾಂಗ್ ಮತ್ತು ಇನ್ನಿತರ ಶಕ್ತಿಗಳು ಕ್ಷೇತ್ರದ ವಿರುದ್ಧ ನಡೆಸುವ ಷಡ್ಯಂತ್ರಗಳ ತನಿಖೆಗೆ NIA ತಂಡ ರಚಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು.
ಅದರ ಮುಂದುವರಿದ ಭಾಗವಾಗಿ ಇಂದು ಬಿಜೆಪಿ ಪಕ್ಷದ ಪ್ರಮುಖರ ನಿಯೋಗವೊಂದು, ನವದೆಹಲಿಯಲ್ಲಿ ಕೇಂದ್ರದ ಗೃಹ ಸಚಿವರಾದ ಅಮಿತ್ ಷಾ ರವರನ್ನು ಭೇಟಿ ಮಾಡಿ ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧದ ಅಪಪ್ರಚಾರದ ಷಡ್ಯಂತರವೂ ಸೇರಿದಂತೆ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಮಾಹಿತಿ ಒದಗಿಸಲಾಯಿತು ಎಂದು ದ.ಕ ಬಿಜೆಪಿ ತಿಳಿಸಿದೆ.
ಇದರ ಜೊತೆಗೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿರುವ ಕುರಿತು ವಿವರಣೆ ಕೂಡ ಸಲ್ಲಿಸಿದರು ಎಂದು ದ.ಕ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.