ಕಠ್ಮಂಡು: ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ನಿಷೇಧಿಸಿದನ್ನು ಖಂಡಿಸಿ ಆರಂಭವಾದ ಪ್ರತಿಭಟನೆ ಇಂದು ದೇಶದ ಸರ್ಕಾರವನ್ನೇ ಪತನಗೊಳಿಸಿದೆ. ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಕೆಲವೇ ನಿಮಿಷಗಳ ಮೊದಲು ಪ್ರತಿಭಟನಾಕಾರರೂ ಸಂಸತ್ತಿಗೆ ನುಗ್ಗಿ, ಆ ಆವರಣದಲ್ಲಿರುವ ಒಂದು ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆ. ಬೂದು ಮತ್ತು ಕಪ್ಪು ಹೊಗೆ ಸಂಸತ್ ಕಟ್ಟಡವನ್ನು ಆವರಿಸಿದೆ. ಬೆಂಕಿ ಹೊತ್ತಿ ಉರಿಯುತ್ತಿದ್ದರೂ, ಸಾವಿರಾರು ಪ್ರತಿಭಟನಾಕಾರರು ಸಂಸತ್ತಿಗೆ ನುಗ್ಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಹಿಂದೆ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ ನಂತರವೂ ನೇಪಾಳದಲ್ಲಿ ಹಿಂಸಾಚಾರ ನಿಂತಿಲ್ಲ. ಪ್ರತಿಭಟನಾಕಾರರು ಮಾಜಿ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಮೇಲೆ ದಾಳಿ ನಡೆಸಿದ್ದರು ಮತ್ತು ಕೋಪಗೊಂಡ ಒಂದು ಗುಂಪು ಅವರ ಮನೆಯನ್ನು ಕೂಡ ಪುಡಿಗೊಳಿಸಿದೆ ಎನ್ನಲಾಗಿದೆ.
ಪ್ರಧಾನಿ ಕೆ.ಪಿ. ಶರ್ಮಾ ಓಲಿ ರವರ ಖಾಸಗಿ ನಿವಾಸಕ್ಕೆ ಬೆಂಕಿ ಹಚ್ಚಿದ ಬಗ್ಗೆ ಕೂಡ ವರದಿಯಾಗಿದೆ. ಯುಎಮ್ಎಲ್ ಪಕ್ಷದ ಕಚೇರಿಗೂ ಬೆಂಕಿ ಬಿದ್ದಿದ್ದು, ನೇಪಾಳದ ಪ್ರಸ್ತುತ ಪರಿಸ್ಥಿತಿ ಗಂಭೀರವಾಗಿದ್ದು, ಪ್ರಧಾನಿ ದುಬೈಗೆ ಪಲಾಯನ ಮಾಡಲಿದ್ದಾರೆ ಎಂದು ವರದಿಯಾಗಿದೆ.