ಕಾಸರಗೋಡು: ರುಚಿಯಾದ ಶವಾರ್ಮ(Shawarma) ತಿಂದು 14 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಕಾಸರಗೋಡಿನ ಪಳ್ಳಿಕೆರೆ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಪಳ್ಳಿಕೆರೆ ಪಂಚಾಯತ್‌ನ ಮದರಸಾವೊಂದರಲ್ಲಿ ಈದ್-ಎ-ಮಿಲಾದ್ ಆಚರಣೆಯ ಸಂದರ್ಭದಲ್ಲಿ ಸ್ಥಳೀಯ ರೆಸ್ಟೋರೆಂಟ್‌ನಿಂದ ಶವಾರ್ಮ ಸೇವಿಸಿದ ನಂತರ ಮಕ್ಕಳು ನಿನ್ನೆ ರಾತ್ರಿ ವಾಂತಿ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಅವರನ್ನು ತಕ್ಷಣ ಪಕ್ಕದ ಮಂಜೂರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹೋಟೆಲ್ ಮಾಲೀಕರು ಈ ಹಿಂದೆ ಶವಾರ್ಮದಲ್ಲಿ ದೋಷ ಕಂಡು ಬಂದು ಸಾರ್ವಜನಿಕರು ಎಚ್ಚರಿಕೆ ನೀಡಿದ ಪರಿಣಾಮ ಅದನ್ನು ನಿಲ್ಲಿಸಿದ್ದರು. ಆದರೆ ಓಣಂ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ವ್ಯಾಪಾರದ ದೃಷ್ಟಿಯಲ್ಲಿ ಮತ್ತೊಮ್ಮೆ ಶುರು ಮಾಡಿದ್ದೇವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆದರೆ ಇದೀಗ ಮಕ್ಕಳು ಅಸ್ವಸ್ಥರಾಗಿದ್ದು, ಪೋಷಕರಿಗೆ ಮತ್ತು ಸಂಬಂಧಪಟ್ಟ ಶಾಲಾ ವ್ಯವಸ್ಥಾಪಕರು ಒತ್ತಡವನ್ನು ಎದುರಿಸುತ್ತಿದ್ದಾರೆ. ಮಕ್ಕಳು ಚೇತರಿಸಿಕೊಳ್ಳುತ್ತಿದ್ದು, ಈಗ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮುಖ್ಯಸ್ಥ ರಮೇಶನ್ ತಿಳಿಸಿದ್ದಾರೆ.