ಮಂಗಳೂರು: ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿದ್ದ ಅರೋಮಾಝೆನ್ ಪ್ರೈವೇಟ್ ಲಿಮಿಟೆಡ್ ಪರಫ್ಯೂಮ್ ತಯಾರಿಕಾ ಕಾರ್ಖಾನೆಯಲ್ಲಿ ಬುಧವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡು ಭಾರೀ ಆಸ್ತಿ ನಷ್ಟ ಸಂಭವಿಸಿದೆ.
ಬೆಳಗ್ಗೆ ಸುಮಾರು 5 ಗಂಟೆಯ ಹೊತ್ತಿಗೆ ಬೆಂಕಿ ಪ್ರಚಂಡವಾಗಿ ಹರಡಿಕೊಂಡು ಕೆಲವೇ ಹೊತ್ತಿನಲ್ಲಿ ಕಾರ್ಖಾನೆ ಇಡೀ ಭಸ್ಮವಾಗಿದೆಯೆಂದು ತಿಳಿದುಬಂದಿದೆ. ಪ್ರಾಣಾಪಾಯ ಸಂಭವಿಸದಿದ್ದರೂ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಬೂದಿಯಾಗಿದೆ.
ಘಟನೆಯ ಮಾಹಿತಿ ದೊರಕಿದ ತಕ್ಷಣ ಎಂಸಿಎಫ್, ಎನ್ಎಂಪಿಎ ಹಾಗೂ ಕದ್ರಿಯ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಅವಘಡದ ನಿಜ ಕಾರಣ ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ.
ಮೂಲ ಮಾಹಿತಿ ಪ್ರಕಾರ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.