16 September 2025 | Join group

ನೇಪಾಳದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಿಂದ ಪ್ರಧಾನಿಯವರೆಗೂ — ಸುಶೀಲಾ ಕರ್ಕಿ ಯಾರು?

  • 13 Sep 2025 03:47:13 PM

ಕಠ್ಮಂಡು: ಇದೇ ಮೊದಲ ಬಾರಿಗೆ ನೇಪಾಳದಲ್ಲಿ ಮಹಿಳೆಯೊಬ್ಬರು ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. 73 ವರ್ಷದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ, ನೇಪಾಳದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

 

ಪ್ರತಿಭಟನೆ ಮತ್ತು ಹಿಂಸಾಚಾರಗಳಿಂದ ತತ್ತರಿಸಿದ ನೇಪಾಳದಲ್ಲಿ ಈಗ ಶಾಂತಿ ನೆಲೆಯೂರಿದೆ. ಇಲ್ಲಿನ ರಾಜಧಾನಿ ಕಟ್ಮಂಡು ತನ್ನ ಪ್ರಕ್ಷುಬ್ದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯನಕ್ಕೆ ಸಜ್ಜಾಗಿದ್ದು, ನೇಪಾಳದಲ್ಲಿ ರಾಜಕೀಯ ಮುಖಂಡರ ಮತ್ತು ಅವರ ಅಸ್ತಿಪಾಸ್ತಿಗಳ ಮೇಲೆ ಇಡೀ ವಿಶ್ವವನ್ನೇ ನೇಪಾಳದತ್ತ ಮುಖಮಾಡುವಂತೆ ಮಾಡಿದೆ.

 

ದೇಶದಲ್ಲಿ ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ತಾಂಡವ ಮಾಡುತ್ತಿದ್ದ ಸಂದರ್ಭದಲ್ಲಿ Gen-Z ಯುವ ಸಮೂಹಗಳು ನಡೆಸಿದ ಪ್ರತಿಭಟನೆ ಇಡೀ ನೇಪಾಳದ ರಾಜಕೀಯ ವ್ಯವಸ್ಥೆಯನ್ನೇ ತಲೆ ಕೆಳಗಾಗಿಸಿತ್ತು.

 

ಯಾರು ಹೊಸ ಪ್ರಧಾನಿ ಸುಶೀಲಾ ಕರ್ಕಿ?

ಜುಲೈ 2016 ರಿಂದ ಜೂನ್ 2017 ರವರೆಗೆ ನೇಪಾಳದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿದ್ದರು. ತನ್ನ ಪೀಠದ ಸಮಯದಲ್ಲಿ ಭ್ರಷ್ಟಾಚಾರದ ವಿರುದ್ಧ ಅನುಸರಿಸಿದ ಶೂನ್ಯ ಸಹಿಷ್ಣತೆ ನೀತಿಯಿಂದ ಇಡೀ ದೇಶದ ಯುವ ಸಮುದಾಯದ ಮೆಚ್ಚುಗೆಯನ್ನು ಗಳಿಸಿದ್ದರು. ಆದರೂ, ರಾಜಕೀಯ ವ್ಯವಸ್ಥೆ ಅವರನ್ನು ವಿರೋಧಿಸುತ್ತಿತ್ತು.

 

1952ರಲ್ಲಿ ಕೃಷಿ ಕುಟುಂಬದಲ್ಲಿ ಏಳು ಮಕ್ಕಳಲ್ಲಿ ಹಿರಿಯವಳಾಗಿ ಜನಿಸಿದ ಸುಶೀಲಾ ಕರ್ಕಿ, 1972ರಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪೂರ್ತಿಗೊಳಿಸಿದ್ದರು. ನಂತರ 1975ರಲ್ಲಿ ಭಾರತದ ಬನಾರಸ್ ನ ಹಿಂದೂ ವಿಶ್ವ ವಿದ್ಯಾಲಯದಲ್ಲಿ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತರ ಪದವಿ ಹಾಗೂ 1978ರಲ್ಲಿ ಕಠ್ಮಂಡುವಿನ ತ್ರಿಭುವನ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪಡೆದರು.

 

2009ರಲ್ಲಿ ನೇಪಾಳದ ಸುಪ್ರೀಂ ಕೋರ್ಟ್ ನಲ್ಲಿ ತಾತ್ಕಾಲಿಕ ನ್ಯಾಯಾಧೀಶರಾಗಿ ನೇಮಕಗೊಂಡು, 2016ರ ಹೊತ್ತಿಗೆ, ನೇಪಾಳದ ಮುಖ್ಯ ನ್ಯಾಯಾಧೀಶರ ಉನ್ನತ ಹುದ್ದೆಗೆ ಏರಿದರು. ನೇಪಾಳದ ರಾಜಕೀಯ ವ್ಯಕ್ತಿಗಳ ಮೇಲೆ ಇದ್ದ ಭ್ರಷ್ಟಾಚಾರದ ಆರೋಪಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಘೋಷಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದವರು, ಇಂದಿನ ನೇಪಾಳದ ಹೊಸ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.