ಬೆಂಗಳೂರು: ಮಾದಕ ವಿರೋಧಿ ಚಟುವಟಿಕೆಗಳನ್ನು ಹತ್ತಿಕ್ಕಬೇಕಾದ ಪೊಲೀಸ್ ಇಲಾಖೆಯೇ ಡ್ರಗ್ಸ್ ಮಾಫಿಯಾದಲ್ಲಿ ಕೈ ಜೋಡಿಸಿದರೆ ಅದರ ಪರಿಣಾಮ ಏನಾಗಬಹುದು ಎಂಬಹುದನ್ನು ಊಹಿಸಲು ಅಸಾಧ್ಯ. ಮಾದಕ ವಿರೋಧಿ ಅಭಿಯಾನಗಳನ್ನು ರಾಜ್ಯದಾದ್ಯಂತ ನಡೆಸುತ್ತಿರುವ ಪೊಲೀಸ್ ಇಲಾಖೆಯ ಇನ್ಸ್‌ಪೆಕ್ಟರ್ ಮತ್ತು ಇತರ 10 ಸಿಬ್ಬಂದಿಗಳು ಅಮಾನತುಗೊಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅಮಾನತುಗೊಂಡ ಅಧಿಕಾರಿಗಳಲ್ಲಿ ಚಾಮರಾಜಪೇಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಟಿ ಮಂಜಣ್ಣ ಮತ್ತು ಚಾಮರಾಜಪೇಟೆ ಮತ್ತು ಜೆಜೆ ನಗರ ಠಾಣೆಗಳ 10 ಕಾನ್‌ಸ್ಟೆಬಲ್‌ಗಳು ಸೇರಿ ಒಟ್ಟು 11 ಜನರನ್ನು ಅಮಾನತುಗೊಳಿಸಲಾಗಿದೆ. ತಿಂಗಳಿಗೆ 2 ಲಕ್ಷ ರೂ. ಪಾವತಿ ಮಾಡುತ್ತಿದ್ದೆ ಎಂದು ಡ್ರಗ್ ಮಾರಾಟಗಾರ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಇತ್ತೀಚಿಗೆ ಆರ್.ಆರ್. ನಗರ ಪೊಲೀಸರು ನಡೆಸಿದ ದಾಳಿಯಲ್ಲಿ 6 ಜನರನ್ನು ಸೆರೆಹಿಡಿಯಲಾಗಿತ್ತು. ಸಲ್ಮಾನ್ ಅಲಿಯಾಸ್ ಪಾಪ, ಸಲ್ಮಾನ್ ಅಲಿಯಾಸ್ ಪುಟಾತ್, ನಿಯಾಜ್, ನವಾಜ್ ಮತ್ತು ರೇಷ್ಮಾ ಅವರನ್ನು ಬಂಧಿಸಿ 4 ಲಕ್ಷ ರೂ. ನಗದು ಮತ್ತು 4 ಲಕ್ಷ ರೂ. ಮೌಲ್ಯದ 1,000 ಟೈಡಾಲ್ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದರು. ಈ ದಾಳಿಯ ನಂತರ ಈ ವಿಷಯ ಬೆಳಕಿಗೆ ಬಂದಿತ್ತು.
ಪೊಲೀಸರ ನೇರವಾದ ಬೆಂಬಲ ಆರೋಪಿಗಳಿಗೆ ಇದೆ ಎನ್ನುವ ಸ್ಪಷ್ಟ ಮಾಹಿತಿಯನ್ನು ಪಡೆದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ 11 ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ. ಇತರ ಠಾಣೆಯ ಪೊಲೀಸ್ ಸಿಬ್ಬಂದಿ ಕೂಡ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ. ಎಸಿಪಿ ಚಂದನ್ ಅವರ ವಿವರವಾದ ತನಿಖೆಯ ನಂತರ, ಡಿಸಿಪಿ ಗಿರೀಶ್ ಕ್ರಮಕ್ಕೆ ಶಿಫಾರಸು ಮಾಡಿದರು.