22 October 2025 | Join group

1.8 ಲಕ್ಷ ರೂ. ಫೋನ್ ಬುಕ್ ಮಾಡಿದ್ದ ಗ್ರಾಹಕನಿಗೆ ಶಾಕ್: ಬಾಕ್ಸ್ ನಲ್ಲಿತ್ತು ಚೌಕಾಕಾರದ ಕಲ್ಲು..!

  • 21 Oct 2025 06:47:50 PM

ಬೆಂಗಳೂರು: ವ್ಯಕ್ತಿಯೊಬ್ಬರು ಅಮೆಜಾನ್ ನಲ್ಲಿ ಸ್ಯಾಮ್ಸಂಗ್ ಮೊಬೈಲ್ ಫೋನ್ ಆರ್ಡರ್ ಮಾಡಿದ್ದು, ಅವರಿಗೆ ಡೆಲಿವರಿ ಆಗಿದ್ದ ಬಾಕ್ಸ್ ತೆಗೆದು ನೋಡಿದಾಗ ಕಲ್ಲು ಕಂಡು ಬಂದಿದೆ.

 

ಗ್ರಾಹಕ ಅಕ್ಟೋಬರ್ 14ರಂದು ಅಮೆಜಾನ್ ಮೂಲಕ ಆನ್ಲೈನ್ ನಲ್ಲಿ 1.8 ಲಕ್ಷ ರೂಪಾಯಿ ಮೌಲ್ಯದ ಸ್ಯಾಮ್ಸಂಗ್ ಗ್ಯಾಲಕ್ಸಿ ಜೆಡ್ ಫೋಲ್ಡ್ -7 ಮೊಬೈಲ್ ಫೋನ್ ಬುಕ್ ಮಾಡಿದ್ದಾರೆ. ಅದಕ್ಕೆ ಟ್ರ್ಯಾಕಿಂಗ್ ಐಡಿ ಕೂಡ ಬಂದಿದೆ. 

 

ಅಕ್ಟೋಬರ್ 19ರಂದು ರಾತ್ರಿ 8 ಗಂಟೆಗೆ ಪ್ಯಾಕೇಜ್ ಡೆಲಿವರಿ ಆಗಿದೆ. ವಿಡಿಯೋ ಮಾಡುವ ಮೂಲಕ ಅದನ್ನು ಗ್ರಾಹಕರು ಓಪನ್ ಮಾಡಿದ್ದು, ಅದರಲ್ಲಿ ಮೊಬೈಲ್ ಫೋನ್ ಬದಲಿಗೆ ಒಂದು ಚೌಕಾಕಾರದ ಕಲ್ಲು ಇರುವುದು ಕಂಡು ಬಂದಿದೆ.

 

ಮೋಸ ಹೋಗಿರುವುದನ್ನು ಅರಿತ ಗ್ರಾಹಕ ಎನ್.ಸಿ.ಆರ್.ಪಿ. ಪೋರ್ಟಲ್ ನಲ್ಲಿ ದೂರು ದಾಖಲಿಸಿದ್ದು, ನಂತರ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.