22 October 2025 | Join group

ಕಲ್ಲಡ್ಕದ ಕುದ್ರೆಬೆಟ್ಟುವಿನಲ್ಲಿ ನೋಡುಗರ ಮನಸೆಳೆಯುವ ವಿಶಿಷ್ಟ ಪರಿಕಲ್ಪನೆಯ ಬೃಹತ್ ಗೂಡುದೀಪ!

  • 21 Oct 2025 08:28:32 PM

ಕಲ್ಲಡ್ಕ: ದೀಪಾವಳಿ ಬಂದರೆ ಮನೆ ಮನೆಗಳಲ್ಲಿ ಬಿದಿರಿನ ಕಡ್ಡಿಗಳನ್ನು ಸೇರಿಸಿ ಬಣ್ಣದ ಕಾಗದದಿಂದ ಗೂಡುದೀಪಗಳನ್ನು ಅಲಂಕರಿಸುವ ಸಂಪ್ರದಾಯ ನೆನಪಿಗೆ ಬರುತ್ತದೆ. ಆದರೆ ಈಗಿನ ದಿನಗಳಲ್ಲಿ ಆ ಕೈಚಳಕದ ಸೌಂದರ್ಯ ಮರೆತು, ಅಂಗಡಿಯಲ್ಲೇ ಸಿಗುವ ಬಣ್ಣ ಬಣ್ಣದ ಗೂಡುದೀಪಗಳನ್ನು ಅಂಗಳದಲ್ಲಿ ನೇತು ಹಾಕುವುದು ಸಾಮಾನ್ಯವಾಗಿದೆ.

 

ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಗ್ರಾಮದಲ್ಲಿ ಸ್ಥಳೀಯ ಯುವಕರು ತಮ್ಮದೇ ಕೈಚಳಕದಿಂದ ನಿರ್ಮಿಸಿದ ಬೃಹದಾಕಾರದ ಗೂಡುದೀಪವು ಶ್ರೀ ಮಣಿಕಂಠ ಮಂದಿರದ ಕಲ್ಲುರ್ಟಿ ದೈವಸ್ಥಾನದ ಆವರಣದಲ್ಲಿ ಅದ್ಭುತವಾಗಿ ರಾರಾಜಿಸುತ್ತಿದೆ.

 

ಈ ಗೂಡುದೀಪವು ಕೇವಲ ಬೆಳಕಿನ ಅಲಂಕಾರವಲ್ಲ — ಅದು ಧರ್ಮ, ಸಂಘಟನೆ, ದೇಶಭಕ್ತಿ, ಧಾರ್ಮಿಕತೆ ಮತ್ತು ತುಳು ಸಂಸ್ಕೃತಿಯ ಸಂಕೇತವಾಗಿದೆ.

 

ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರು ವರ್ಷದ ಸಂಭ್ರಮದ ಅಂಗವಾಗಿ ‘RSS 100’, ಅಯೋಧ್ಯ ಶ್ರೀರಾಮ ಮಂದಿರದ ನಿರ್ಮಾಣ, ದೇಶಕ್ಕಾಗಿ ಹೋರಾಡಿದ ಸೈನಿಕರಿಗೆ ಸ್ಮಾರಕವಾದ ಇಂಡಿಯಾ ಗೇಟ್, ಹಾಗೂ ತುಳುನಾಡಿನ ಆತ್ಮವನ್ನು ಪ್ರತಿಬಿಂಬಿಸುವ ಜೈ ತುಳುನಾಡು ಚಿತ್ತಾರಗಳನ್ನು ಈ ದೀಪದಲ್ಲಿ ಸುಂದರವಾಗಿ ಅಳವಡಿಸಲಾಗಿದೆ.

 

ಇದರಿಂದಾಗಿ ಕುದ್ರೆಬೆಟ್ಟುವಿನ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಹೊಳೆಯುತ್ತಿರುವ ಈ ಬೃಹತ್ ಗೂಡುದೀಪ ನೋಡುಗರ ಮನಸೆಳೆಯುತ್ತಿದ್ದು, ದೀಪಾವಳಿಯ ಆನಂದಕ್ಕೆ ಹೊಸ ಚೈತನ್ಯ ತುಂಬುತ್ತಿದೆ.