ಬೆಂಗಳೂರು: ಸಹಕಾರ ಚಳವಳಿ ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ಅಗತ್ಯವಿದ್ದು, ಜವಾಹರಲಾಲ್ ನೆಹರೂ ಅವರ ಜಯಂತಿಯ ದಿನ ನವೆಂಬರ್ 14ರಂದು 72ನೇ ಸಹಕಾರಿ ಸಪ್ತಾಹದ ಉದ್ಘಾಟನೆ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ “72ನೇ ಸಹಕಾರ ಸಪ್ತಾಹ” ಆಚರಣೆಯ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ, ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅರಮನೆ ಮೈದಾನದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಸಪ್ತಾಹ ನಡೆಯಲಿದ್ದು, ಮಂಗಳೂರು, ರಾಯಚೂರು, ಹಾವೇರಿ, ಹೊಸಪೇಟೆ, ಕೊಪ್ಪಳದಲ್ಲಿ ಸಪ್ತಾಹ ನಡೆಯಲಿದೆ. ಸಮಾರೋಪ ಸಮಾರಂಭವು ನವೆಂಬರ್ 20ರಂದು ಚಾಮರಾಜನಗರದಲ್ಲಿ ನಡೆಯಲಿದೆ ಎಂದರು.
“ಸಹಕಾರ ರತ್ನ” ಪ್ರಶಸ್ತಿ ಪ್ರದಾನ ಸಮಾರಂಭವೂ ಸಪ್ತಾಹದ ಉದ್ಘಾಟನೆಯ ದಿನವೇ ನಡೆಯಲಿದೆ. ರಾಜ್ಯದ ಎಲ್ಲಾ ಸಹಕಾರಿ ಧುರೀಣರು ನನಗೇ ಜವಾಬ್ದಾರಿ ಕೊಟ್ಟಿದ್ದು ನಾನೇ “ಸಹಕಾರ ರತ್ನ” ಪ್ರಶಸ್ತಿಗೆ ಹೆಸರು ಸೂಚಿಸಲು ಕೋರಿದ್ದಾರೆ. ಸಹಕಾರ ಮಹಾಮಂಡಳದ ಅಧ್ಯಕ್ಷರ ಜೊತೆ ಚರ್ಚಿಸಿ ಪ್ರಶಸ್ತಿಗೆ ಉತ್ತಮ ಸಹಕಾರಿಯನ್ನು ಆಯ್ಕೆ ಮಾಡುತ್ತೇನೆ ಎಂದರು.





