ನವದೆಹಲಿ: ಅಪ್ರಾಪ್ತ ವಯಸ್ಕರಾಗಿದ್ದಾಗ ತಮ್ಮ ಹೆಸರಿನಲ್ಲಿದ್ದ ಆಸ್ತಿಯನ್ನು ನ್ಯಾಯಾಲಯದ ಪೂರ್ವಾನುಮತಿ ಪಡೆಯದೇ ಪೋಷಕರು ಮಾರಾಟ ಮಾಡಿದ್ದರೆ, ಪ್ರಾಪ್ತ ವಯಸ್ಕರಾದ ನಂತರ ಆ ಮಕ್ಕಳು ಅಂತಹ ಆಸ್ತಿ ಮಾರಾಟವನ್ನು ನಿರಾಕರಿಸಲು ಹಕ್ಕು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ಅಕ್ಟೋಬರ್ 7 ರಂದು ನೀಡಿದ ಈ ತೀರ್ಪಿನಲ್ಲಿ, ಪ್ರಾಪ್ತ ವಯಸ್ಕರಾದ ಬಳಿಕ ಮಕ್ಕಳು ತಮ್ಮ ಪೋಷಕರು ನ್ಯಾಯಾಲಯದ ಅನುಮತಿ ಪಡೆಯದೆ ಮಾರಾಟ ಮಾಡಿದ ಆಸ್ತಿಯನ್ನು ನಿರಾಕರಿಸಲು ಮೊಕದ್ದಮೆ ಹೂಡಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ನ್ಯಾಯಾಲಯದ ಅನುಮತಿ ಇಲ್ಲದೆ ಪೋಷಕರು ಮಾಡಿದ ಆಸ್ತಿ ವ್ಯವಹಾರವನ್ನು, ಆಸ್ತಿಯ ನಿಜವಾದ ಹಕ್ಕುದಾರರಾದ ಮಕ್ಕಳು ಪ್ರಾಪ್ತ ವಯಸ್ಕರಾದ ಬಳಿಕ ಸ್ವತಂತ್ರವಾಗಿ ಆ ಆಸ್ತಿಯನ್ನು ಮಾರಾಟ ಮಾಡುವುದರಿಂದ ಅಥವಾ ವರ್ಗಾಯಿಸುವುದರಿಂದಲೇ ಹಿಂದಿನ ವ್ಯವಹಾರವನ್ನು ನಿರಾಕರಿಸಿದಂತೆ ಪರಿಗಣಿಸಲಾಗುತ್ತದೆ, ಎಂದು ನ್ಯಾಯಾಲಯ ಹೇಳಿದೆ.
ದಾವಣಗೆರೆಯ ಕೆ.ಎಸ್. ಶಿವಪ್ಪ ವಿರುಧ್ಧ ಕೆ. ನೀಲಮ್ಮ ಪ್ರಕರಣದ ವಿಚಾರಣೆ ವೇಳೆ, ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಮತ್ತು ಪ್ರಸನ್ನ ಬಿ. ವರಾಳೆ ಅವರ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಈ ತೀರ್ಪು ಭವಿಷ್ಯದಲ್ಲಿ ಅಪ್ರಾಪ್ತ ವಯಸ್ಕರ ಹೆಸರಿನಲ್ಲಿರುವ ಆಸ್ತಿಗಳ ವ್ಯವಹಾರಗಳಲ್ಲಿ ಪೋಷಕರು ಹಾಗೂ ಖರೀದಿದಾರರು ಕಾನೂನು ಕ್ರಮ ಪಾಲನೆಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕೆಂಬ ಸಂದೇಶ ನೀಡಿದೆ.





