ಬಂಟ್ವಾಳ: ಮಹಿಳೆಯೋರ್ವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸರಪಾಡಿ ಎಂಬಲ್ಲಿ ಅ.25ರ ಮಧ್ಯಾಹ್ನ ವೇಳೆ ನಡೆದಿದೆ.
ಅಲ್ಲಿಪಾದೆ ನಿವಾಸಿ ಮೀನಾಕ್ಷಿ ಪೂಜಾರಿ (70) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾರೆ. ಅಲ್ಲಿಪಾದೆಯಿಂದ ಬಂದ ಈಕೆ ಸರಪಾಡಿಯಲ್ಲಿ ಅಂಗಡಿಯೊಂದಕ್ಕೆ ಹೋಗಿದ್ದು ಬಳಿಕ ನೇರವಾಗಿ ನೇತ್ರಾವತಿ ನದಿ ಸಮೀಪ ಬಂದಿದ್ದಾರೆ. ಸರಪಾಡಿಯಿಂದ ಬರಿಮಾರು ಕಡವಿನ ಬಾಗಿಲಿಗೆ ಜನಸಾಗಿಸುವ ದೋಣಿಯ ನಾವಿಕ ಅಲ್ಲೇ ಇದ್ದು ಅವರನ್ನು ಕಡವಿನ ಬಾಗಿಲಿಗೆ ಬರುವವರಿದ್ದೀರಾ? ಎಂದು ಕೇಳಿದ್ದಾರೆ. ಆದರೆ ಈಕೆ ನಾನು ಬರುವುದಿಲ್ಲ ಎಂದು ಹೇಳಿ ಅಲ್ಲೇ ಉಳಿದುಕೊಂಡಿದ್ದಾರೆ.
ನಂತರ ನಾವಿಕ ದೋಣಿಯನ್ನು ಕಡವಿನ ಬಾಗಿಲಿಗೆ ಕೊಂಡುಹೋಗಿದ್ದು, ಕೆಲವೇ ಹೊತ್ತಿನಲ್ಲಿ ಇವರು ನದಿಗೆ ಹಾರಿದ್ದಾರೆ. ಈ ಸಂದರ್ಭದಲ್ಲಿ ಅಲ್ಲೇ ನದಿಯಿಂದ ಮರಳು ತೆಗೆಯುತ್ತಿದ್ದ ಕಾರ್ಮಿಕರು ಕೂಡಲೇ ನದಿಗೆ ಹಾರಿ ಬದುಕಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅವರ ಪ್ರಯತ್ನ ಫಲ ನೀಡದೆ ಆಕೆ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಭೇಟಿ ನೀಡಿದ್ದಾರೆ.





