ಬೆಂಗಳೂರು: ನವೆಂಬರ್ 1 ರ ಇಂದು ರಾಜ್ಯಾದ್ಯಂತ 70ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಕಂಠೀರವ ಕ್ರೀಡಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿದ್ದಾರೆ.
ಹೊರ ರಾಜ್ಯಗಳಿಂದ, ಹೊರ ದೇಶಗಳಿಂದ ಶಿಕ್ಷಣ, ಉದ್ಯೋಗ ಇನ್ನಿತರೆ ಕಾರಣಗಳಿಗಾಗಿ ಇಲ್ಲಿ ನೆಲೆಸಿರುವ, ಬದುಕು ಕಟ್ಟಿಕೊಂಡಿರುವ ಎಲ್ಲರೂ ಕನ್ನಡಿಗರೇ, ನಮ್ಮವರೇ. ನಾವು – ನೀವು ಎಲ್ಲರೂ ಸೇರಿ ಕನ್ನಡವನ್ನು ಬಳಸುವ, ಬೆಳೆಸುವ ಸಂಕಲ್ಪವನ್ನು ಈ ದಿನ ಸ್ವೀಕರಿಸೋಣ. ನೆಲದ ಭಾಷೆ ಮನದ ಭಾಷೆಯಾಗಲಿ, ಕನ್ನಡದ ಚಿಗುರು ಎಲ್ಲರೆದೆಯೊಳಗೆ ಮೊಳಕೆಯೊಡೆಯಲಿ ಎಂದು ಹೇಳಿದ್ದಾರೆ.
ಕನ್ನಡ ಮಣ್ಣಿನಲ್ಲೇ ಹುಟ್ಟಿ ಬೆಳೆದವರು, ಹೊರರಾಜ್ಯದಿಂದ ಬಂದು ಇಲ್ಲಿ ಬದುಕು ಕಟ್ಟಿಕೊಂಡವರು ಕನ್ನಡ ಭಾಷೆಯಲ್ಲೇ ವ್ಯವಹರಿಸಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಇರುವ ಎಲ್ಲಾ ಕಚೇರಿಗಳು, ಅಂಗಡಿ – ಮುಂಗಟ್ಟುಗಳು, ವಿವಿಧ ವಾಣಿಜ್ಯೋದ್ಯಮ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಎಂಬ ಆದೇಶವನ್ನು ಹೊರಡಿಸಿದ್ದೇವೆ. ಬೇರೆ ಭಾಷೆಗಳನ್ನು ಗೌರವಿಸೋಣ. ನೆಲದ ಭಾಷೆ ಕನ್ನಡವನ್ನು ಪ್ರೀತಿಸೋಣ ಎಂದು ತಿಳಿಸಿದ್ದಾರೆ.




