01 July 2025 | Join group

ಈ ವರ್ಷ ದಸರಾ ಹಬ್ಬ 11 ದಿನ – ಇತಿಹಾಸದಲ್ಲಿ ಇದೇ ಮೊದಲಲ್ಲ” ಎಂದು ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ

  • 22 Jun 2025 01:16:25 PM

ಮೈಸೂರು: ಈ ವರ್ಷ ಮೈಸೂರು ದಸರಾ ಹಬ್ಬವನ್ನು 11 ದಿನ ಆಚರಣೆ ನಡೆಸಲಾಗುವುದು. ಈ ಬಗ್ಗೆ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟಣೆ ನೀಡಿದ್ದಾರೆ.

 

"ಈ ವರ್ಷ ದಸರಾ ಮಹೋತ್ಸವ ಹನ್ನೊಂದು ದಿನಗಳ ಆಚರಣೆಯಾಗಿರುವುದು ಅಭೂತಪೂರ್ವವಲ್ಲ, ಬದಲಿಗೆ ಚಂದ್ರನ ಕ್ಯಾಲೆಂಡರ್ ಅನ್ನು ಆಧರಿಸಿದ ಸಾಂಪ್ರದಾಯಿಕ ಆಚರಣೆಗಳಿಗೆ ಅನುಗುಣವಾಗಿದೆ" ಎಂದು ತಿಳಿಸಿದ್ದಾರೆ.

 

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, "ಹನ್ನೊಂದು ದಿನಗಳ ಕಾಲ ನಡೆಯುವ ಈ ವರ್ಷದ ದಸರಾ ಆಚರಣೆಯನ್ನು 400 ವರ್ಷಗಳಲ್ಲಿ ಮೊದಲ ಬಾರಿಗೆ ಆಚರಿಸಲಾಗುತ್ತದೆ ಎಂದು ಮಾಧ್ಯಮಗಳ ವರದಿ ಬಂದಿರುವುದು ವಾಸ್ತವಿಕವಾಗಿ ತಪ್ಪಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ.

 

ದಸರಾ ಹಬ್ಬವನ್ನು ಸಾಮಾನ್ಯವಾಗಿ ಒಂಬತ್ತು ದಿನಗಳಲ್ಲಿ ಆಚರಿಸಲಾಗುತ್ತದೆಯಾದರು, ಹಿಂದೆ ಆಚರಣೆಗಳು ಅಷ್ಟ ರಾತ್ರಿ (8 ರಾತ್ರಿಗಳು) ನವರಾತ್ರಿ (9 ದಿನಗಳು) ದಶರಾತ್ರಿ (10 ದಿನಗಳು) ಮತ್ತು ಹನ್ನೊಂದು ದಿನಗಳು ನಡೆದಿರುವ ಹಲವಾರು ನಿದರ್ಶನಗಳಿವೆ. ದಸರಾ ಸೇರಿದಂತೆ ಎಲ್ಲಾ ಹಬ್ಬಗಳಿಗೆ ಮೈಸೂರು ಅರಮನೆ ಆಚರಿಸುವ ಕ್ಯಾಲೆಂಡರ್ (ಪಂಚಾಂಗ) ಚಂದ್ರನ ಕ್ಯಾಲೆಂಡರ್ ಅನ್ನು ಆಧರಿಸಿದೆ.

 

ಈ ಹಿಂದೆಯೂ 11 ದಿನ ದಸರಾ ಆಚರಣೆ ಮಾಡಿದ್ದೇವೆ. 1920, 1929, 1953, 1963, 1980, 1990, 1998, 2000, 2015, 2016 ರಲ್ಲಿ ಕೂಡ 11 ದಿನ ದಸರಾ ಆಚರಣೆ ಮಾಡಿದ್ದೇವೆ.