ತಾನು ಸಾಕಿದ ಮಗಳಂದಿರು ನಿರ್ಲಕ್ಷಿಸಿದರೆಂಬ ಕಾರಣಕ್ಕೆ 65 ವರ್ಷ ಪ್ರಾಯದ ನಿವೃತ್ತ ಸೈನಿಕರೊಬ್ಬರು ತನ್ನ ಬಳಿ ಇದ್ದ 4 ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನು ದೇವಸ್ಥಾನಕ್ಕೆ ಬರೆದು ಕೊಟ್ಟ ಸಂಗತಿ ಬೆಳಕಿಗೆ ಬಂದಿದೆ.
ತಮಿಳುನಾಡಿನ ಎಸ್. ವಿಜಯನ್ ಎಂಬವರು ಈ ದಾನವನ್ನು ಮಾಡಿದ್ದಾರೆ. ತಮಿಳುನಾಡಿನ ತಿರುಮಲೈ ಜಿಲ್ಲೆಯ ಅರಣಿ ಪಟ್ಟಣದ ಸಮೀಪದ ಕೇಶವಪುರ ಗ್ರಾಮದಲಿದ್ದ 4 ಕೋಟಿ ಬೆಲೆ ಬಾಳುವ ಆಸ್ತಿಯನ್ನು ಅರುಲ್ಮಿಗು ರೇಣುಗಾಂಬಲ್ ಅಮ್ಮನ್ ದೇವಸ್ಥಾನಕ್ಕೆ ದಾನವಾಗಿ ನೀಡಿದ್ದಾರೆ.
ಅನುವಂಶಿಕ ಆಸ್ತಿಯ ಕುರಿತು ಧೀರ್ಘಕಾಲದ ಕೌಟುಂಬಿಕ ಉದ್ವಿಗ್ನತೆಯ ನಂತರ ಈ ದೇಣಿಗೆ ಬಂದಿದೆ ಎಂದು ತಮಿಳು ನಾಡಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದಾರೆ.
ತನ್ನ ಹೆಂಡತಿಯನ್ನು ಕಳೆದುಕೊಂಡ ಇವರು ಹತ್ತು ವರ್ಷಗಳ ಕಾಲ ಒಬ್ಬಂಟಿಯಾಗಿ ಜೀವನ ನಡೆಸಿದ್ದರು. ಬಹಳ ವರ್ಷಗಳ ಕಾಲ ಒತ್ತಡದಲ್ಲಿ ಜೀವನ ನಡೆಸುತ್ತಿದ್ದ ಇವರು, ತನ್ನ ಹೆಣ್ಣು ಮಕ್ಕಳು ಸರಿಯಾಗಿ ನೋಡಿಕೊಂಡಿಲ್ಲ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಆಶ್ಚರ್ಯವೆಂದರೆ, ದಾನಿ ಎಸ್. ವಿಜಯನ್ ಈ ವಿಚಾರದ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಗೆ ಮೊದಲೇ ತಿಳಿಸಿರಲಿಲ್ಲ. ವಾಡಿಕೆಯಂತೆ ಪ್ರತಿ ಎರಡು ತಿಂಗಳಿಗೊಮ್ಮೆ ದೇವಸ್ಥಾನದ ಹುಂಡಿಯನ್ನು ದೇವಸ್ಥಾನದ ಆಡಳಿತ ಮಂಡಳಿ ತೆರೆದು ಹೂಡಿಕೆಯಾಗಿರುವ ಹಣವನ್ನು ತೆಗೆಯುವ ಪ್ರಕಾರ, ಜೂನ್ 24 ರಂದು ಕಾಣಿಕೆ ಹುಂಡಿಯನ್ನು ತೆರೆದು ನೋಡಿದಾಗ ಅದರಲ್ಲಿ ಆಸ್ತಿಯ ಎರಡು ಪ್ರಮಾಣ ಪತ್ರ ಕಾಣಿಕೆ ಹುಂಡಿಯ ಚಿಲ್ಲರೆಯ ಮಧ್ಯೆ ಸಿಕ್ಕಿರುತ್ತದೆ.
ತನ್ನ ಕೈಗಳಿಂದ ಆಸ್ತಿಗಳನ್ನು ದೇವಸ್ಥಾನಕ್ಕೆ ಸ್ವಇಚ್ಛೆಯಿಂದ ದಾನ ಮಾಡುತ್ತೇನೆ ಎಂದು ಬರೆದ ಪತ್ರ ಸಿಕ್ಕಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ದೇವಸ್ಥಾನಕ್ಕೆ ತಾಗಿ ಕೊಂಡಿರುವ 3 ಕೋಟಿ ಬೆಲೆ ಬಾಳುವ 10 ಸೆಂಟ್ಸ್ ಖಾಲಿ ಜಾಗ ಮತ್ತು 1 ಕೋಟಿ ಬೆಲೆ ಬಾಳುವ ವಸತಿ ಆಸ್ತಿ ದೇವಸ್ಥಾನಕ್ಕೆ ಬರೆದು ಕೊಟ್ಟಿರುತ್ತಾರೆ. ಸೂಕ್ತ ಕಾನೂನು ಕ್ರಮಗಳ ನಂತರ ಸಮಿತಿಯು ಮುಂದಿನ ಕ್ರಮ ಕೈಗೊಳ್ಳುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.