ಕೊಪ್ಪಳ: ಇಲ್ಲಿನ ಗವಿ ಮಠ ವಿಶಿಷ್ಟ ಕ್ಷಣಕ್ಕೆ ಸಾಕ್ಷಿಯಾಗಿದೆ. ಮಠಕ್ಕೆ ಮುಸ್ಲಿಂ ಮಹಿಳೆಯೊಬ್ಬರು ಪ್ರತಿದಿನ ಭೇಟಿ ನೀಡಿ ನಾಗದೇವರ ಕಟ್ಟೆಯ ಮುಂದೆ ಧ್ಯಾನಕ್ಕೆ ಕುಳಿತಿರುವ ದೃಶ್ಯ ಕಂಡುಬಂದಿದೆ.
ಕೊಪ್ಪಳ ಗವಿ ಮಠಕ್ಕೆ ಎಲ್ಲಾ ಧರ್ಮದ ಜನರು ಭೇಟಿ ಕೊಡುತ್ತಾರೆ. ಈ ಮಠ ಭಾವೈಕ್ಯತೆಯ ಸಂಕೇತವಾಗಿದೆ. ಕಳೆದ 8 ದಿನಗಳಿಂದ ಪ್ರತಿನಿತ್ಯ ಮಠಕ್ಕೆ ಭೇಟಿ ಕೊಟ್ಟು ಈ ಮಹಿಳೆ ದಿನದ 1 ಗಂಟೆ ಧ್ಯಾನದಲ್ಲಿ ಕುಳಿತುಕೊಳ್ಳುವುದು ತುಂಬಾ ವಿಶೇಷವೆನಿಸಿದೆ.
ಕೊಪ್ಪಳದ ಯಲಬುರ್ಗ ತಾಲೂಕಿನ ಕುದರಿ ಮೋತಿ ನಿವಾಸಿ ಹಸೀನಾ ಬೇಗಂ ಎಂಬ ಮಹಿಳೆ ಧ್ಯಾನದಲ್ಲಿ ಮಗ್ನರಾಗಿದ್ದಾರೆ. ಗವಿ ಮಠದ ಶ್ರೀಗಳು ನಿತ್ಯ ಸಂಜೆ ಸಮಯದಲ್ಲಿ ಕೂಡೋ ಜಾಗದ ಮುಂದೆ ಮಹಿಳೆ ಧ್ಯಾನವನ್ನು ಮಾಡುತ್ತಿದ್ದಾರೆ.
ಧ್ಯಾನದಿಂದ ಮಾನಸಿಕ ನೆಮ್ಮದಿ ದೊರೆತಿದ್ದು, ಎಲ್ಲಾ ದೇವರುಗಳು ಒಂದೇ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಮಹಿಳೆಯ ಆಧ್ಯಾತ್ಮಿಕ ಚಿಂತನೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.